ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಗಳನ್ನು ಗುರುವಾರವೇ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
9.11.2022ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಹಕ್ಕು, ಆಕ್ಷೇಪಗಳ ಸ್ವೀಕಾರದ ಬಳಿಕ ವಿಶೇಷ ನೋಂದಣಿ ಅಭಿಯಾನ ನಡೆದಿದ್ದು, ಗುರುತು ಚೀಟಿ ವಿತರಣೆಯೂ ಪ್ರಗತಿಯಲ್ಲಿದೆ. ವಿಶೇಷ ಪರಿಷ್ಕರಣೆ ಮುಕ್ತಾಯಗೊಂಡಿದ್ದರೂ ನಿರಂತರ ಪರಿಷ್ಕರಣೆ ಎಂದಿನಂತೆ ಮುಂದುವರಿಯಲಿದೆ ಎಂದರು.
2022ರ ಯೋಜಿತ ಜನಸಂಖ್ಯೆ 23,57,852 ಆಗಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 17,37,688 ಮತದಾರರಿದ್ದಾರೆ. ಇದರಲ್ಲಿ 8,50,552 ಪುರುಷ ಹಾಗೂ 8,87,060 ಮಹಿಳೆಯರು. ಇತರ ಮತದಾರರು ಸಂಖ್ಯೆ 76 ಇದೆ. 47,174 ಮಂದಿಯನ್ನು ಈ ಅಭಿಯಾನದಲ್ಲಿ ಸೇರ್ಪಡೆ ಮಾಡಿದ್ದು 18,441 ಮಂದಿಯ ಹೆಸರು ರದ್ದುಗೊಳಿಸಿದೆ, 18678 ಮಂದಿಯ ಮಾಹಿತಿ ಪರಿಷ್ಕರಿಸಲಾಗಿದೆ.
ಜಿಲ್ಲೆಯಲ್ಲಿ ಹಿಂದಿನ ಪಟ್ಟಿ ಪ್ರಕಾರ 9,845 ಯುವ ಮತದಾರರಿದ್ದು ಈಗ 15,414 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಒಟ್ಟು ಸಂಖ್ಯೆ 25,259ಕ್ಕೆ ಏರಿದೆ. ಜಿಲ್ಲೆಯಲ್ಲಿ 13,706 ವಿಕಲಚೇತನ ಮತದಾರರು, 6,392 ಗಣ್ಯ ಮತದಾರರು, 546 ಸೇವಾ ಮತದಾರರು, 76 ಮಂಗಳಮುಖೀಯರು, 225 ಅನಿವಾಸಿ ಭಾರತೀಯ ಮತದಾರರು ಇದ್ದಾರೆ.
ಅಭಿಯಾನದ ಭಾಗವಾಗಿ ಈಗಾಗಲೇ ರಚಿಸಲಾಗಿರುವ ಎಪಿಕ್ ಕಾರ್ಡ್‌ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮತದಾರರ ಮನೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ, 16099 ಗುರುತು ಚೀಟಿ ಮುದ್ರಣಕ್ಕೆ ಹೋಗಿದ್ದು, ಅದರಲ್ಲಿ 15760 ಸಿಕ್ಕಿದೆ, 14610 ಈಗಾಗಲೇ ವಿತರಣೆ ಕೂಡಾ ಆಗಿದೆ.
ಮತದಾರರ ಗುರುತುಚೀಟಿಯನ್ನು ಆಧಾರ್ ಜೊತೆ ಜೋಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿದೆ., 12,46,710 ಮತದಾರರು ಈಗಾಗಲೇ ಆಧಾರ್ ಜೊತೆ ಜೋಡಿಸಿದ್ದಾರೆ ಎಂದ ಡಿಸಿ, ಚುನಾವಣಾ ಆಯೋಗದ ಆದೇಶದಂತೆ ಆಧಾರ್ ಜೋಡಣೆ ಕಡ್ಡಾಯವಾಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಚುನಾವಣಾ ಆಯೋಗ ನಮ್ಮ ಜಿಲ್ಲೆಗೆ ವಿಶೇಷ ಪರಿಷ್ಕರಣ ಅಭಿಯಾನದಲ್ಲಿ 17,40,515 ಮತದಾರರ ಗುರಿ ನೀಡಿದ್ದು, ಈಗ ಶೇ 99.84ರಷ್ಟು ಗುರಿಸಾಧಿಸುವ ಮುಖೇನ 17,37,688 ಮಂದಿಯನ್ನು ಸೇರ್ಪಡೆ ಮಾಡಿದಂತಾಗಿದೆ ಎಂದು ಡಿಸಿ ವಿವರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ಮೋಹನ್ ಉಪಸ್ಥಿತರಿದ್ದರು.


























