ಮಂಗಳೂರು: ಆನ್ಲೈನ್ ಮೂಲಕ ತರಿಸಿದ ಊಟ ತಿಂದ ವಿದ್ಯಾರ್ಥಿನಿ ಸಾವನಪ್ಪಿರುವ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ.
ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ( 19) ಮೃತ ಯುವತಿ, ಈಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿಕಾಂ ವಿದ್ಯಾರ್ಥಿನಿಯಾಗಿದ್ದಳು.
ಪಾರ್ವತಿ ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥಗೊಂಡಿದ್ದರು. ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಆದರೇ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು, ಆಹಾರ ಸೇವಿಸಿದ್ದ ಎಲ್ಲರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿತ್ತು. ಆದರೇ ಅಂಜುಶ್ರಿ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸ್ಥಿತಿ ಗಂಭೀರವಾದುದರಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಟೇಲ್ ಮಾಲಿಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.


























