ಬಂಟ್ವಾಳ : ತಾಲೂಕಿನ ಕಾರಿಂಜ ತಾಣವನ್ನು ಶೀಘ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಘೋಷಿಸಿದರು. ಕಾರಿಂಜೇಶ್ವರ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಉತ್ತಮ ಪರಿಸರವನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ಇತ್ತೀಚೆಗೆ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರೊಂದಿಗೆ ಕಾರಿಂಜಕ್ಕೆ ಭೇಟಿ ನೀಡಿದ್ದ ಅವರು ಜನರೊಂದಿಗೆ ಬೆರೆತು ಮಾತನಾಡಿದರು. ಈ ವೇಳೇ ಸಾರ್ವಜನಿಕರು ಮತ್ತು ಭಕ್ತರು ದೇಗುಲಕ್ಕೆ ಕಲ್ಲುಕ್ವಾರಿಗಳಿಂದ ಅಪಾಯ ಇರುವ ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಕಲ್ಲುಗಣಿಗಾರಿಕೆ ಇದೇ ರೀತಿ ಮುಂದುವರಿದರೆ ದೇಗುಲವು ನಾಶವಾಗಬಹುದು, ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದರು.

ಕಾರಿಂಜ ಪರಿಸರಕ್ಕೆ ಇರುವ ಆತಂಕದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಸರ್ಕಾರವು ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡ ನಂತರ ಅಗತ್ಯ ಕ್ರಮ ಜರುಗಿಸಲಿದೆ. ಈ ತಾಣವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಮುಖ್ಯಮಂತ್ರಿ ಸಹ ಒಲವು ತೋರಿದ್ದಾರೆ ಎಂದು ಹೇಳಿದರು.
ಕಲ್ಲುಗಣಿಗಳಿಂದಾಗಿ ದೇಗುಲಕ್ಕೆ ಧಕ್ಕೆಯಾಗುತ್ತಿದೆ ಎಂದು ಹಲವು ದೂರುಗಳು ಬಂದಿವೆ. ಇದಕ್ಕೆ ಕಡಿವಾಣ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ದೇಗುಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದರು.
ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಳದ ಗರ್ಭಗುಡಿಗೆ ಹಾನಿಯಾಗಿದೆ., ಭವಿಷ್ಯದಲ್ಲಿ ದೇವಾಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಕೋರೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಹೋರಾಟ ನಡೆಸಿತ್ತು. ಮೂರು ಹಂತಗಳಲ್ಲಿ ಹಿಂದೂ ಜಾಗರಣ ವೇದಿಕೆ ಬೃಹತ್ ಹೋರಾಟ ನಡೆಸಿತ್ತು. ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದ ಹಿಂದೂ ಜಾಗರಣ ವೇದಿಕೆ ಮುಖ್ಯಮಂತ್ರಿಗಳಿಗೂ ಮನವಿಯನ್ನು ಸಲ್ಲಿಸಿದ್ದರು.




























