ಮಡಿಕೇರಿ: ಕೊಡಗಿನಲ್ಲಿ ನಡೆದ ಎರಡು ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಓರ್ವ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಯುವತಿಯೊಬ್ಬಳ ಕೊಲೆ ಆಗಿದೆ. ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾಪಂಡ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಾಫಿ ತೋಟದಲ್ಲಿ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರಣ ಹುಡುಕುತ್ತಿದ್ದಾರೆ.
ಮತ್ತೊಂದೆಡೆ ಕೊಡಗಿನ ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರತಿ ಕೊಲೆಯಾದ ಯುವತಿಯಾಗಿದ್ದು, ವಿರಾಜಪೇಟೆ ತಾಲೂಕಿನ ನಾಂಗಾಲದಲ್ಲಿ ಘಟನೆ ನಡೆದಿದೆ.
ಕೊಲೆಯಾದ ಆರತಿ ನಾಂಗಾಲದ ಮಾದಪ್ಪ ಎಂಬುವರ ಮಗಳು. ಅಪರಿಚಿತರಿಂದ ಈ ಕೊಲೆ ನಡೆದಿದ್ದು, ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತ ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿದೆ. ಕೊಲೆಯಾದ ಅನತಿ ದೂರದಲ್ಲಿ ತಮ್ಮಯ್ಯ ಎಂಬಾತನ ಹೆಲ್ಮೆಟ್ ಹಾಗೂ ಬೈಕ್ ಪತ್ತೆಯಾಗಿದೆ. ಈತ ಮೂರು ದಿನಗಳಿಂದ ಆರತಿಗೆ ಟಾರ್ಚರ್ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಆತನೇ ಬಂದು ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದರ ಜೊತೆ ಆತನ ಮೊಬೈಲ್ ಹಾಗೂ ಚಪ್ಪಲಿ ಸ್ಥಳದಲ್ಲಿ ಪತ್ತೆಯಾಗಿದ್ದು, ಆರತಿಯ ಹತ್ಯೆ ಬಳಿಕ ಆತನು ವಿಷ ಸೇವಿಸಿರುವ ಅನುಮಾನ ವ್ಯಕ್ತವಾಗಿದೆ.
ಮೊಬೈಲ್ ದೊರೆತಿರುವ ಸ್ಥಳದಲ್ಲಿ ವಿಷದ ಬಾಟಲ್ ಕೂಡ ಪತ್ತೆಯಾಗಿದ್ದು, ಆರತಿ ಕೊಲೆ ಮಾಡಿದ ಬಳಿಕ ಆತ ಮದ್ಯದ ಜೊತೆಗೆ ವಿಷ ಸೇವಿಸಿರುವ ಅನುಮಾನವಿದೆ. ಆತನಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



























