ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ ಕೈದಿ ಮಂಗಳೂರಿನ ಜಯೇಶ್ ಪೂಜಾರಿ ಎಂದು ತಿಳಿದುಬಂದಿದ್ದು, ಈತನ ಕ್ರೈಮ್ ಹಿಸ್ಟರಿ ಕೂಡ ಅದೇ ರೀತಿಯಲ್ಲಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಯೇಶ್ ಪೂಜಾರಿ ಆರೇಳು ವರ್ಷಗಳ ಹಿಂದೆ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ.
ನಾಲ್ಕು ವರ್ಷಗಳ ಹಿಂದೆ ಅಂದು ಉತ್ತರ ವಲಯ ಐಜಿಪಿಯಾಗಿದ್ದ ಇಂದಿನ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ಗೆ ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ್ದನು.
ಮೂಲತಃ ಕಡಬ ತಾಲೂಕು ಶಿರಾಡಿ ನಿವಾಸಿಯಾಗಿರುವ ಜಯೇಶ್ ಪೂಜಾರಿ 2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದನು. 2016ರ ಆಗಸ್ಟ್ 12ರಂದು ಮಂಗಳೂರಿನ ಐದನೇ ಸೆಷನ್ಸ್ ನ್ಯಾಯಾಲಯವು ಜಯೇಶ್ ಪೂಜಾರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2017ರಲ್ಲಿ ಮರಣ ದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಜಯೇಶ್ ಪೂಜಾರಿ 2018ರಲ್ಲಿ ಅಂದಿನ ಉತ್ತರ ವಲಯ ಐಜಿಪಿಯಾಗಿದ್ದ ಇಂದಿನ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. 2019ರ ಮೇ 1ರಂದು ಮೈಸೂರು ಜೈಲಿಗೆ ಸ್ಥಳಾಂತರಗೊಂಡಿದ್ದ ಜಯೇಶ್ ಪೂಜಾರಿ, 2021ರ ಸೆಪ್ಟೆಂಬರ್ 14ರಂದು ಮರಳಿ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದನು.
ಹಿಂಡಲಗಾ ಜೈಲಿನ ಕೈದಿಯಿಂದ ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ ಸಂಬಂಧ ಎಟಿಎಸ್ ಅಧಿಕಾರಿಗಳಿಂದ ಕೈದಿ ಜಯೇಶ್ ಪೂಜಾರಿ ವಿಚಾರಣೆ ನಡೆದಿದೆ. ಎಟಿಎಸ್ನ ಎಪಿಐ ಶಿಲ್ಪಾ ಯಮಗಾರ ನೇತೃತ್ವದಲ್ಲಿ ಮಹಾರಾಷ್ಟ್ರದ ATS ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದ್ದಾರೆ. ಜಯೇಶ್ ಪೂಜಾರಿ ಬಳಿ ಇದ್ದ ಡೈರಿ ಜಪ್ತಿ ಮಾಡಿದ್ದು, ಅದರಲ್ಲಿ ಕೇಂದ್ರ ಸಚಿವರು, ಪೊಲೀಸ್ ಅಧಿಕಾರಿಗಳ ನಂಬರ್ ಪತ್ತೆಯಾಗಿದೆ.
ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ ಸಂಬಂಧ ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507 ಅಡಿ ಎಫ್ಐಆರ್ ದಾಖಲಾಗಿದೆ. ‘ನಿತಿನ್ ಗಡ್ಕರಿ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ‘ನಾನು ದಾವೂದ್ ಗ್ಯಾಂಗ್ನಿಂದ ಮಾತನಾಡುತ್ತಿದ್ದೇನೆ, ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಹೇಳಿ 100 ಕೋಟಿ ಹಣ ಕಳುಹಿಸಿ. ಇಲ್ಲದಿದ್ದರೆ ಗಡ್ಕರಿ ಎಲ್ಲಿ ಸಿಗುತ್ತಾರೋ ಅಲ್ಲಿ ಬಾಂಬ್ ಸ್ಫೋಟಿಸಿ ಕೊಲ್ಲುತ್ತೇನೆ. ನನಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿ ಗೊತ್ತು, ಬೆಂಗಳೂರಿಗೆ ಹಣ ಕಳುಹಿಸಿ’ ಎಂದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಚಾರವನ್ನು ಸಿಬ್ಬಂದಿ ಗಡ್ಕರಿ ಗನ್ಮ್ಯಾನ್ ದೀಪಕ್‌ಗೆ ತಿಳಿಸಿದ್ದಾರೆ. ಬೆಳಗ್ಗೆ 11.37ಕ್ಕೆ ಮತ್ತೆ ಕರೆ ಮಾಡಿ ಬೆದರಿಕೆ ಹಾಕಿದ್ದ ಕೈದಿ ಜಯೇಶ್, ಈ ವೇಳೆ 8139923258 ನಂಬರ್ ನೀಡಿದ್ದನು. ಮಧ್ಯಾಹ್ನ 12.29ಕ್ಕೆ ಮತ್ತೊಮ್ಮೆ ಕರೆ ಮಾಡಿದ್ದ ಜಯೇಶ್ ಪೂಜಾರಿ, ನನ್ನ ಸಂದೇಶವನ್ನು ನಿತಿನ್ ಗಡ್ಕರಿಗೆ ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಆಗ ಸಾಹೇಬರು ಬ್ಯುಸಿ ಇದ್ದಾರೆ ಅಂತಾ ಸಿಬ್ಬಂದಿ ಹೇಳಿದ್ದಾರೆ. ನಿನ್ನ ಹೆಸರು, ವಿಳಾಸ ತಿಳಿಸು ಎಂದಾಗ ನೀವು ಕ್ಯಾಶ್ ಕರ್ನಾಟಕಕ್ಕೆ ಕಳುಹಿಸಿ ಅಲ್ಲಿಂದ ಹೇಳುತ್ತೇವೆ ಎಂದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ..



























