ಉಡುಪಿ : ಮಲ್ಪೆಗೆ ಆಗಮಿಸಿದ್ದ ವ್ಲಾಗರ್‌ಗೆ ಸೈಂಟ್ ಮೇರಿಸ್ ಐಲ್ಯಾಂಡ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಲ್ಪೆ ಬೀಚ್ ಒಳಹೊಕ್ಕಾಗಿ ವಿವಿಧೆಡೆ ಸುಂಕ ಪಾವತಿಸಿ ತೆರಳುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆಗಳು ಬೇಸರ ತರಿಸುತ್ತಿವೆ. ಸಖತ್ ಕಂಟೆಂಟ್ಸ್ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್‌ನ ಪ್ರವಾಸಿ ವ್ಲಾಗರ್ ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‌ಗೆ ತೆರಳಲು ಬೈಕ್‌ನಲ್ಲಿ ಆಗಮಿಸಿದ್ದ. ಮಲ್ಪೆ ಸೀ ವಾಕ್ ಬಳಿ ಬೈಕ್ ಪಾರ್ಕಿಂಗ್‌ಗೆ ಶುಲ್ಕ ಪಾವತಿಸಿದ್ದಾನೆ. ಪಾರ್ಕಿಂಗ್ ಶುಲ್ಕ ಪಡೆದವರು ಕೆಮರಾಕ್ಕೆಂದು ಶುಲ್ಕ ಪಡೆದಿದ್ದರು. ಆದರೆ ಐಲ್ಯಾಂಡ್ ತಲುಪಿದ ಬಳಿಕ ಪ್ರತ್ಯೇಕ ಕ್ಯಾಮರಾ ಶುಲ್ಕ ಕಟ್ಟಬೇಕು ಎಂದು ಸಿಬ್ಬಂದಿ ಹೇಳಿದಾಗ ನಡೆದ ಮಾತಿನ ಜಟಾಪಟಿಯನ್ನು ವ್ಲಾಗರ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ ಲೋಡ್ ಮಾಡಿದ್ದು, ಸಿಬ್ಬಂದಿಯ ವರ್ತನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ವರದಿಗೆ ಜಿಲ್ಲಾಧಿಕಾರಿ ಸೂಚನೆ
ಈ ಘಟನೆಯ ವಿವರನ್ನು ಪಡೆದುಕೊಳ್ಳಲಾಗುತ್ತಿದೆ. ನಗರಸಭೆ ಪೌರಾಯುಕ್ತರಿಗೆ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ..


























