ಉಳ್ಳಾಲ: ಠಾಣಾಧಿಕಾರಿ ಸಂದೀಪ್ ಅವರ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ನಕಲಿ ಖಾತೆಯನ್ನು ತೆರೆದಿರುವ ಹ್ಯಾಕರ್ ಗಳು ಹಲವರಲ್ಲಿ ಹಣಕ್ಕಾಗಿ ಬೇಡಿಕೆಯನ್ನು ಇಡುತ್ತಿದ್ದಾರೆ. ಈ ಕುರಿತು ಠಾಣಾಧಿಕಾರಿ ತನ್ನ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಮುಖಪುಟದಲ್ಲಿ ದೂರು ಹಂಚಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆರೆದು ಸಂದೀಪ್ ಅವರ ಸ್ನೇಹಿತರಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಎಲ್ಲಾ ಸ್ನೇಹಿತರಲ್ಲಿ ಕಷ್ಟದಲ್ಲಿರುವ ಕಾರಣ ಹೇಳಿ 7,500 ರೂ ಕೊಡುವಂತೆ ಸಂದೇಶ ಹಾಕಲಾಗುತ್ತಿದೆ. ಇದು ಠಾಣಾಧಿಕಾರಿ ಗಮನಕ್ಕೆ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಹಣ ನೀಡದಂತೆ ಸಂದೇಶ ಹಾಕಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸೇರಿದಂತೆ ಗಣ್ಯರು, ಪತ್ರಕರ್ತರ ಫೇಸ್ ಬುಕ್ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಸ್ನೇಹಿತರನ್ನು ಮತ್ತೆ ತನ್ನ ಖಾತೆಗೆ ಸೇರಿಸಿಕೊಂಡು ಹಣವನ್ನು ಕೇಳುವ ಜಾಲ ದ.ಕ ಜಿಲ್ಲೆಯಾದ್ಯಂತ ಹಲವು ತಿಂಗಳಿನಿಂದ ನಡೆಯುತ್ತಿದೆ. ಈ ಕುರಿತು ಸೈಬರ್ ಸೆಲ್‍ನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಹ್ಯಾಕರ್ ಗಳ ಪತ್ತೆ ಅಸಾಧ್ಯವಾಗುತ್ತಿದೆ.
ಮೂಲವೊಂದರ ಪ್ರಕಾರ ಉತ್ತರಭಾರತ ಮೂಲದ ರೈತರುಗಳ ಬ್ಯಾಂಕ್ ಖಾತೆಗೆ, ಹ್ಯಾಕರ್ ಗಳು ಹಣವನ್ನು ಮೋಸದ ಮೂಲಕ ವರ್ಗಾಯಿಸುತ್ತಿದ್ದಾರೆ. ಅಲ್ಲಿ ರೈತರಿಗೆ ಸಣ್ಣ ಮೊತ್ತವನ್ನು ನೀಡಿ ಅವರಿಂದ ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಪಡೆದುಕೊಂಡು ಹಣವನ್ನು ವರ್ಗಾಯಿಸುತ್ತಿದ್ದಾರೆ. ಜಿಲ್ಲೆಯ ಸೈಬರ್ ಸೆಲ್ ಪೊಲೀಸರು ಅಕೌಂಟ್ ಫ್ರೀಝ್ ಮಾಡಿ ಉತ್ತರಭಾರತಕ್ಕೆ ತಲುಪುವ ಹೊತ್ತಲ್ಲಿ ಬಡರೈತ ಮಾತ್ರ ಪೊಲೀಸರಿಗೆ ಎದುರಾಗುತ್ತಿದ್ದಾನೆ. ಆದರೆ ಆರೋಪಿಗಳ ಸುಳಿವು ಲಭ್ಯವಾಗುತ್ತಿಲ್ಲ..
























