ಬೆಂಗಳೂರು: ಇಬ್ಬರು ನಾನು ನಿನಗಾಗಿ, ನೀನು ನನಗಾಗಿ ಎಂದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಆರು ವರ್ಷಗಳ ಪ್ರೀತಿಗೆ ಯುವತಿ ಎಳ್ಳುನೀರು ಬಿಟ್ಟಿದ್ದಾಳೆ.
ಇದರಿಂದ ಮನನೊಂದ ಪ್ರಿಯತಮ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ನಗರದ ಉಲ್ಲಾಳ ಉಪನಗರದಲ್ಲಿ ನಡೆದಿದೆ.
ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್(25) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಲ್ಲಾಳ ಉಪನಗರದ ನಿವಾಸಿ ರೋಹಿತ್ ಮತ್ತು ಕಾಲೇಜು ವ್ಯಾಸಾಂಗ ಮಾಡುತ್ತಿದ್ದ ಯುವತಿಯೋರ್ವಳು ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜೋಡಿ ಹಕ್ಕಿಗಳಂತೆ ಇದ್ದರು. ಆದರೆ ಇತ್ತೀಚೆಗೆ ಭೇಟಿ ಮಾಡಿದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆರು ವರ್ಷಗಳ ಪ್ರೀತಿಗೆ ಎಳ್ಳುನೀರು ಬಿಡಲು ನಿರ್ಧರಿಸಿದ ಯುವತಿ, ನಾವು ಬ್ರೇಕಪ್ ಮಾಡಿಕೊಳ್ಳೋಣ ಎಂದಿದ್ದಾಳೆ. ಆದರೆ ನಿತ್ಯ ಜಿಮ್ ಮಾಡಿಕೊಂಡು ದಷ್ಟಪುಷ್ಟವಾಗಿದ್ದ ರೋಹಿತ್, ಆಕೆಯನ್ನು ಬಿಟ್ಟಿರಲಾಗದೆ ಕೊರಗುತ್ತಿದ್ದನು.
ಯುವತಿ ಬ್ರೇಕಪ್ ಮಾಡಿಕೊಂಡ ನಂತರ ಆಕೆ ರೋಹಿತ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಹೀಗಾಗಿ ಆಕೆಯ ಮನವೋಲಿಸುವ ನಿಟ್ಟಿನಲ್ಲಿ ರೋಹಿತ್ ಆಕೆ ವ್ಯಾಸಾಂಗ ಮಾಡುತ್ತಿದ್ದ ಕಾಲೇಜು ಬಳಿಯೂ ಹೋಗಿದ್ದನು. ಅಲ್ಲಿ ಆಕೆಯನ್ನು ಮಾತನಾಡಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದ ರೋಹಿತ್ ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮನೆಮಗನನ್ನು ನೋಡಿದ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜ್ಞಾನಭಾರತಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ..


























