ಮಂಗಳೂರು : ಕರ್ನಾಟಕ ರಾಜ್ಯ ಅಗ್ನಿಶಾಮಕದಳದ ವತಿಯಿಂದ ಎ.14 ರಿಂದ 20 ರವರೆಗೆ “ಅಗ್ನಿಶಾಮಕ ಸೇವಾ ಸಪ್ತಾಹ” ಹಮ್ಮಿಕೊಳ್ಳಲಾಗಿದೆ. ಇದರ ಧ್ಯೇಯ ವಾಕ್ಯ “ಅಗ್ನಿ ಸುರಕ್ಷತಾ ಉಪಕರಣಗಳ ನಿರ್ವಹಣೆ ಅಗ್ನಿ ಅವಘಡಗಳನ್ನು ತಗ್ಗಿಸುವ ಪ್ರಮುಖ ಸಾಧನಗಳು” ಆಗಿದ್ದು, ಬೆಂಕಿಯಿಂದಾಗುವ ಅಪಘಾತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಬೆಂಕಿ ಆಕಸ್ಮಿಕದ ಬಗ್ಗೆ ನಾಗರಿಕರಿಗೆ ತಿಳುವಳಿಕೆಗಳು : ಬೆಂಕಿ ದೊಡ್ಡದಿರಲಿ, ಚಿಕ್ಕದಿರಲಿ ಸಹಾಯಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗೆ ದೂರವಾಣಿ ಮೂಲಕ ಸಂಪರ್ಕಿಸುವುದು. ದೂರವಾಣಿ – 101,08251-232101,236100. ಸೀಮೆಎಣ್ಣೆ ಅಥವಾ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರನ್ನು ಸುರಿಯಬೇಡಿ, ನೀರು ಭಾರವಾದ್ದರಿಂದ ಕೆಳಗಿಳಿದು ಬೆಂಕಿಯ ರಭಸ ಹೆಚ್ಚಾಗುತ್ತದೆ ಹಾಗೂ ಬೆಂಕಿಯು ಮನೆಯ ಬೇರೆಡೆಗೂ ಹರಡುವ ಸಾಧ್ಯತೆಗಳು ಇರುತ್ತದೆ, ಇಂತಹ ಸಂದರ್ಭದಲ್ಲಿ ಬೆಂಕಿ ನಂದಿಸಲು ಹೆಚ್ಚಿನ ಮರಳನ್ನು ಬಳಸುವುದು,
ವಿದ್ಯುತ್ ಓಲೆಗಳಲ್ಲಿ ಕೆಲಸ ಮಾಡುವಾಗ ಮರದ ಹಲಗೆ ಅಥವಾ ರಬ್ಬರ್ ಶೀಟ್ ಮೇಲೆ ನಿಂತು ಕೆಲಸ ಮಾಡಬೇಕು. ಯಾವುದೇ ವಿದ್ಯುತ್ ಬೆಂಕಿಯಾದಾಗ ನೀರನ್ನು ಬಳಸದಿರಿ, ಬದಲಾಗಿ ತಕ್ಷಣವೇ ಮೈನ್ ಸ್ವಿಚ್ ಆಫ್ ಮಾಡಿ ಮರಳನ್ನು ಎರಚಬೇಕು. ಅಂಗಡಿ ಮಳಿಗೆ ರಾತ್ರಿ ಬೀಗ ಹಾಕಿ ಹೋಗುವಾಗ, ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿ ಹೋಗುವುದು, ದೇವರ ಫೋಟೊ ಮುಂದೆ ದೀಪ ಅಥವಾ ಗಂಧದ ಕಡ್ಡಿ ಹಚ್ಚಿದ್ದಲ್ಲಿ ನಂದಿಸಿ ಹೋಗುವುದು.
ಎಲ್. ಪಿ. ಜಿ ಸೋರುವಿಕೆ ಕಂಡು ಬಂದರೆ :ಪ್ರತಿ ಉಪಯೋಗದ ನಂತರ ಬರ್ನಲ್ ಹಾಗೂ ರೆಗ್ಯುಲೇಟರ್ ವಾಲ್ಟ್ ಅನ್ನು ಸರಿಯಾಗಿ ಮುಚ್ಚಬೇಕು, ಅಡುಗೆ ಅನಿಲ ಸೋರಿರುವ ಬಗ್ಗೆ ಸಂಶಯ ಬಂದರೆ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆಯಬೇಕು, ಸ್ಥಳದಲ್ಲಿರುವ ಯಾವುದೇ ವಿದ್ಯುತ್ ಸ್ವಿಚ್ ಹಾಕಬಾರದು ಹಾಗೂ ನಿಲ್ಲಿಸಬಾರದು. ಅನಿಲ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡಾಗ : ಸಾಧ್ಯವಿದ್ದರೇ ತಕ್ಷಣವೇ ಬೆಂಕಿಯನ್ನು ಒದ್ದೆ ಚೀಲದಿಂದ ಮುಚ್ಚಿ ಆರಿಸಲು ಪ್ರಯತ್ನಿಸಬೇಕು.ಅಗ್ನಿಶಾಮಕ ಸೇವೆಯ ವಾಹನಗಳು ರಸ್ತೆಯಲ್ಲಿ ಬರುವಾಗ ಪಾದಚಾರಿಗಳು ಸೈಕಲ್ ಸವಾರರು ವಾಹನ ಚಾಲಕರು ದಾರಿಬಿಟ್ಟು ಕೊಡಬೇಕು ಎಂದು ತಿಳಿಸಿರುತ್ತಾರೆ.