ಬಂಟ್ವಾಳ: ಧಾರ್ಮಿಕ, ಸಾಮಾಜಿಕ ಧುರೀಣ, ಕೊಡುಗೈ ದಾನಿಯಾಗಿರುವ ಬಂಟ್ವಾಳ ತಾಲೂಕಿನ ಕೆ.ಸೇಸಪ್ಪ ಕೋಟ್ಯಾನ್(75)ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ ವೇಳೆ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆ ಮೃತಪಟ್ಟ ಬಗ್ಗೆ ಮನೆಯವರು ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದ್ದ ಇವರು ಶುಭ ಬೀಡಿ, ಶುಭ ಟ್ರಾವೆಲ್ಸ್ , ಶುಭಲಕ್ಮೀ ಮದುವೆ ಹಾಲ್, ಸಹಿತ ಅನೇಕ ಉದ್ಯಮ ನಡೆಸುತ್ತಿದ್ದು, ಅನೇಕ ಕುಟುಂಬಗಳಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದರು.
ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಪಡೆದಿದ್ದರು.
ಇವರು ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯವಾಗಿದ್ದು, ಅನೇಕ ದೈವ ದೇವಸ್ಥಾನಗಳು ಜೀರ್ಣೋದ್ಧಾರ ಇವರ ಮೂಲಕ ನಡೆದಿವೆ. ಬಂಟ್ವಾಳ ಪೋಲೀಸ್ ಲೈನ್ ನ ದೇವಸ್ಥಾನದ ಅಧ್ಯಕ್ಷರಾಗಿದ್ದ ಇವರು ಕಳೆದ 25 ವರ್ಷಗಳಿಂದ ಬಂಟ್ವಾಳ ಬಿಲ್ಲವ ಸಂಘದ ಯಶಸ್ವಿ ಅಧ್ಯಕ್ಷರಾಗಿ ಮಿಂಚಿದವರು.
ಮೃತರು ಪತ್ನಿ, ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜ. 27ರ ಬೆಳಗ್ಗೆ 9ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತರ ಸ್ವಗೃಹ ಪಚ್ಚಿನಡ್ಕದ ಶುಭ ನಿಲಯದಲ್ಲಿ ಇಡಲಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.


























