ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಮಂಗಳೂರು ಪೊಲೀಸ್ ಕಮಿಷನರ್ಗೆ ಲೋಕಾಯುಕ್ತರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಫೆ.14ರೊಳಗೆ ತನಿಖಾ ವರದಿ, ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್, ಎಸ್ಐ ಪ್ರದೀಪ್ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮೊಹಮ್ಮದ್ ಕಬೀರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಮಂಗಳೂರು ಪೊಲೀಸ್ ಕಮಿಷನರ್ಗೆ ನೋಟಿಸ್ ನೀಡಿದ್ದಾರೆ. ಹಾಗೂ ತನಿಖಾ ವರದಿ, ದಾಖಲೆ ಸಹಿತ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ದೂರಿನಲ್ಲೇನಿದೆ..!??
ಇನ್ಸ್ಪೆಕ್ಟರ್, ಎಸ್ಐ ವಿರುದ್ಧ ಹಣ ವಸೂಲಿ ಸೇರಿ ಹಲವು ಆರೋಪಗಳನ್ನು ಕಬೀರ್ ಮಾಡಿದ್ದಾರೆ. ಬ್ರೋಕರ್ ಹಮೀದ್ ಎಂಬುವನ ಮೂಲಕ ಹಣ ವಸೂಲಿ ಆರೋಪ, ಗಾಂಜಾ ಮಾಫಿಯಾ, ಮರಳು ಮಾಫಿಯಾಗಳಿಂದ ಹಣ ವಸೂಲಿ, ಹೋಟೆಲ್ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹಾಗೂ ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಾಂತರ ರೂ. ಸಂಪಾದನೆ ಮಾಡಿದ್ದಾರೆ. ಚಿನ್ನದ ಅಂಗಡಿ ದರೋಡೆ ಕೇಸ್ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ್ದಾರೆ ಎಂದು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದಾರೆ. ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೂ ಆರೋಪ ಮಾಡಿದ್ದಾರೆ. ಕಮಿಷನರ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ಮೊಹಮ್ಮದ್ ಕಬೀರ್ ದೂರು ನೀಡಿದ್ದಾರೆ.
ಈ ಕುರಿತು ಇ-ಮೇಲ್ ಮೂಲಕ ಹಲವು ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಎಸಿಬಿ, ಎಡಿಜಿಪಿ, ದ.ಕ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಎಲ್ಲರಿಗೂ ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೂ ಯಾವುದೇ ಸ್ಪಂದನೆಯಿಲ್ಲ. ಪೊಲೀಸರ ಭ್ರಷ್ಟಾಚಾರದ ಬಗ್ಗೆ ದೂರು ನೀಡಿರುವುದಕ್ಕೆ ತನಗೆ ಬೆದರಿಕೆಯನ್ನು ಹಾಕಲಾಗಿದೆ. ಅಲ್ಲದೇ ದೂರು ನೀಡಿದ ಬಗ್ಗೆ ತನ್ನನ್ನೇ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಬೀರ್ ದೂರು ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಲಂ.9 ರಡಿಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ನೋಟಿಸ್ ನೀಡಿದ್ದು 2023ರ ಫೆ.14 ರ ಒಳಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಪೊಲೀಸ್ ಕಮೀಷನರ್ ಶಶಿಕುಮಾರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

























