ಬೆಂಗಳೂರು: ಇತ್ತೀಚೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಅನುಭವ ಖ್ಯಾತಿಯ ನಟಿ ಅಭಿನಯ ಹಾಗೂ ಆಕೆಯ ಕುಟುಂಬದ ಮೇಲೆ ಲುಕೌಟ್ ನೋಟಿಸ್ ಜಾರಿಯಾಗಿದೆ.
ಅತ್ತಿಗೆ ವರಲಕ್ಷ್ಮಿ ಅವರು ನಟಿ ಅಭಿನಯ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಅಭಿನಯ ಕುಟುಂಬ ವರದಕ್ಷಿಣೆ ಹಣ ಪಡೆದಿದ್ದಲ್ಲದೆ ಲಕ್ಷ್ಮಿಯವರನ್ನು ಪೋಷಕರ ಮನೆಗೆ ಅಟ್ಟಿದ್ದರು. 80 ಸಾವಿರ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ವರದಕ್ಷಿಣೆ ರೂಪವಾಗಿ ಪಡೆದಿರುವುದು ಕೂಡ ಸಾಬೀತಾಗಿತ್ತು. ಸೆಷನ್ಸ್ ಕೋರ್ಟ್ ಅಭಿನಯ, ತಾಯಿ ಹಾಗೂ ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು.
ಯಾವಾಗ ಜೈಲು ಶಿಕ್ಷೆ ಪ್ರಕಟವಾಯಿತೋ, ಅಂದಿನಿಂದ ಅಭಿನಯ ಮತ್ತು ಕುಟುಂಬದ ಸದಸ್ಯರು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಈ ಮೊದಲು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಅಭಿನಯ, ಸಹೋದರ ಹಾಗೂ ತಾಯಿ ಹೈಕೋರ್ಟ್‌ಗೆ ಹೋಗಿದ್ದರು. ಆದರೆ ಹೈಕೋರ್ಟ್ ಸಹ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು.
ಈ ಹಿನ್ನೆಲೆ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಕೈಗೆ ಅವರು ಸಿಗದೇ ತಲೆಮರೆಸಿಕೊಂಡಿದ್ದಾರೆ. ಇದೀಗ ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಪತ್ತೆಗೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಸಾರ್ವಜನಿಕರಿಗೆ ಈ ಎಲ್ಲಾ ಆರೋಪಿಗಳ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.