ನವದೆಹಲಿ : ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ವೈರಸ್ ಒಂದೇ ದಿನ ಅತೀ ಹೆಚ್ಚು ಮಂದಿಯಲ್ಲಿ ಪತ್ತೆಯಾದ ದೇಶಗಳ ಪೈಕಿ ಭಾರತ ಒಂದನೇ ಸ್ಥಾನಕ್ಕೆ ಬಂದು ನಿಂತಿದೆ. ಬುಧವಾರ ಭಾರತದಲ್ಲಿ 3,15,925 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದಕ್ಕೂ ಮೊದಲು ವಿಶ್ವದಲ್ಲೇ ಅತ್ಯಧಿಕ ಎಂದರೆ 3,07,581 ಪ್ರಕರಣಗಳು ಅಮೆರಿಕದಲ್ಲಿ ಜನವರಿ 8ರಂದು ವರದಿಯಾಗಿತ್ತು. ಇದೀಗ ಒಂದೇ ದಿನ ವಿಶ್ವದಲ್ಲೇ ಅತ್ಯಧಿಕ ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೋನ ಸೋಂಕಿನಿಂದ 2104 ಮಂದಿ ಮೃತಪಟ್ಟಿದ್ದು ದೇಶದಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಸಾವು ಇದಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,59,30,965ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,78,841 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,34,54,880ಕ್ಕೆ ತಲುಪಿದೆ. ಭಾರತದಲ್ಲಿ ಬುಧವಾರ ಒಂದೇ ದಿನ 16,51,711 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು ಈವರೆಗೂ 27,27,05,103 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.