ಮುಡಿಪು: ಮುಡಿಪು ಶ್ರೀ ಭಾರತಿ ಅನುದಾನಿತ ಶಾಲೆ 1948ರಲ್ಲಿ ಸ್ಥಾಪನೆಯಾಗಿದ್ದು, ಅಮೃತ ಮಹೋತ್ಸವ ಸಂಭ್ರಮದಲ್ಲಿದೆ.
ಅಮೃತ ಮಹೋತ್ಸವ ಆಚರಣೆಗೆ ಸಮಿತಿ ರಚನೆಯಾಗಿದ್ದು, ಸಿದ್ಧತೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಸ್ಮಾರಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಸಮಾರಂಭ ಫೆ.23ರಂದು ಗುರುವಾರ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ನಡೆಯುವ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ಧರ್ಮಗುರುಗಳು ಹಾಗೂ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ನಿರ್ದೇಶಕ ವಂ.ಫಾದರ್ ಅಸ್ಸಿಸ್ ರೆಬೆಲ್ಲೋ ಹಾಗೂ ಮುಡಿಪು ಎಜು ಪಾರ್ಕ್ ಅಧ್ಯಕ್ಷ ಹಾಗೂ ಧರ್ಮಗುರುಗಳಾದ ಡಾ.ಅಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಪ್ ತಂಙಳ್ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ಸಾರ್ವಜನಿಕರು ಪಾಲ್ಗೊಂಡು ಅಮೃತ ಮಹೋತ್ಸವ ಚಟುವಟಿಕೆಯಲ್ಲಿ ಕೈಜೋಡಿಸುವಂತೆ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಶಾಲೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಕೆ. ಹಾಗೂ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.