ಮಂಗಳೂರು: ಬಂಟ ಸಮಾಜಕ್ಕೆ ನಿಗಮ, ಮೀಸಲಾತಿಯನ್ನು 3ಬಿಯಿಂದ 2ಎಗೆ ವರ್ಗಾಯಿಸಬೇಕು ಎನ್ನುವ ಎರಡು ಬೇಡಿಕೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಮುಖ್ಯಮಂತ್ರಿಗೆ ಮನವಿ
ಸಲ್ಲಿಸಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ರಸ್ತೆಗಿಳಿಯುವುದಿಲ್ಲ, ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಿನ್ನೆ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಾಜಕ್ಕೂ ನಿಗಮ, ಸರಕಾರದಿಂದ ಸಹಾಯ
ಸಿಗುತ್ತಿದೆ. ಆದರೆ ಬಂಟರಿಗೆ ಅಂತಹ ಸಹಕಾರ, ನಿಗಮ ಬಂದಿಲ್ಲ. ಇದುವರೆಗೂ ನಾವು ಹೋರಾಟ ಮಾಡಿಲ್ಲ, ಇದರರ್ಥ ನಮಗೆ ಶಕ್ತಿ ಇಲ್ಲ ಎಂದಲ್ಲ. ಬಂಟ ಸಮಾಜದ ಐವರು ಶಾಸಕರಿದ್ದು, ಅವರೇ
ನಮ್ಮ ಬೇಡಿಕೆ ಈಡೇರಿಸಬೇಕಿತ್ತು. ಇದಕ್ಕಾಗಿ ನಮ್ಮ ಅಗತ್ಯವಿರಲಿಲ್ಲ. ಈಗ ನಮ್ಮ ನಾಯಕರನ್ನು ಸಮಾಜ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರು, ಬ್ರಾಹ್ಮಣರಿಗೂ ನಿಗಮದ ಭರವಸೆ
ನೀಡಲಾಗಿದೆ. ಅದಕ್ಕಿಂತ ಮೊದಲು ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡು ಬರುತ್ತಿದ್ದರೂ ಶೇ.25ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೂ ಬಂಟ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷಗಳು ಕೊಟ್ಟಿಲ್ಲ. ಐದು ಜನ ಶಾಸಕರು ಬಂಟರಾಗಿದ್ದರೂ ಸ್ವಸಮುದಾಯಕ್ಕೆ ಸಹಾಯ ಮಾಡಿದರೆ ಇತರ ಸಮುದಾಯಕ್ಕೆ ಕೋಪ ಬರಬಹುದೇ ಎನ್ನುವ ಅಳುಕು ಇರಬಹುದು ಎಂದು ತಿಳಿಸಿದರು.
ಬಿಲ್ಲವರಿಗೆ ನಿಗಮ ಆಗಿದ್ದು ಸಂತೋಷ, ಅವರಿಗೆ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ರಸ್ತೆ ವಿಚಾರದಲ್ಲಿ ಸುಂದರ ಶೆಟ್ಟಿಯವರ ಹೆಸರು ಬಂದಾಗ ಎಲ್ಲ ಬಂಟರು ಒಗ್ಗಟ್ಟಾಗಿದ್ದರು. ವಿಶ್ವದಾದ್ಯಂತ ಇರುವ ಬಂಟರನ್ನು ತರಿಸಿ ಪ್ರತೀ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಐದು ಸಾವಿರ ಮತಗಳನ್ನು ಪಡೆದರೂ ಗೆಲ್ಲುವ
ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಅವರು ಎಚ್ಚರಿಸಿದರು.

ನಮಗೆ ಯಾರ ಮೇಲೂ ವೈಯುಕ್ತಿಕ ಹಗೆತನವಿಲ್ಲ, ಅಲ್ಲದೆ ನಾನು ಎಂದೋ ಚುನಾವಣೆಗೆ ನಿಂತಿದ್ದರೆ ಶಾಸಕ, ಸಚಿವನಾಗುತ್ತಿದ್ದೆ. ಹಾಲಾಡಿಯವರನ್ನು ಹೊರತುಪಡಿಸಿ ಇತರ ಎಲ್ಲರೂ ನನಗಿಂತ ಕಿರಿಯರಾಗಿದ್ದು ನಾನು ಬೆಂಬಲ ನೀಡಿದ್ದೇನೆ. ಈಗ ನನಗೆ ವಯಸ್ಸಾಗಿದ್ದು, ನಮ್ಮ ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲ ನೀಡುತ್ತೇವೆ. ಆಗಲಾದರೂ ನಮ್ಮ ಬೇಡಿಕೆ ಈಡೇರಿಸದ ಬಗ್ಗೆ
ಈಗಿನ ಶಾಸಕರಿಗೆ ಪಶ್ಚಾತ್ತಾಪ ಆಗಬಹುದು ಎಂದರು.
ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷರಾದ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಒಂದು ಅಭ್ಯರ್ಥಿಯನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ಬಂಟ ಸಮಾಜಕ್ಕಿದೆ. ನಮ್ಮ ಸಮಾಜದ ಐವರು ಶಾಸಕರು ಸಮಾಜದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೋ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬಂಟರು
ಹೇಡಿಗಳಲ್ಲ ಎಂದರು.
ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜೊತೆಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಕರಾವಳಿ ಭಾಗದ
ವಿವಿಧ ಕ್ಷೇತ್ರಗಳ ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.