ಕಲ್ಲಡ್ಕ: ಕೇಸರಿಯ ಗುರುತೆ ತ್ಯಾಗ ಮತ್ತು ಸೇವೆ ಆದುದರಿಂದ ತಮ್ಮ ಸಂಘಟನೆಯ ಹೆಸರಿಗೆ ತಕ್ಕಂತೆ ಹಿಂದೂ ಸಮಾಜದ ಉದ್ಧಾರಕ್ಕಾಗಿ ತ್ಯಾಗ ಹಾಗೂ ಸಮಾಜ ಸೇವೆಯಲ್ಲಿ ನಿರತರಾಗಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ರವರು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಯುವ ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು (ರಿ) ಇದರ ವತಿಯಿಂದ ಎರ್ಮೆಮಜಲು ಜಂಕ್ಷನ್ನಲ್ಲಿ ನಿರ್ಮಾಣವಾದ “ಯುವ ಕೇಸರಿ ಭವನ” ವನ್ನು ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಹಿಂದೂ ಸಮಾಜ ಜಾತಿಭೇದ ಬಿಟ್ಟು ಒಂದಾಗಬೇಕು. ಯುವ ಕೇಸರಿ ಫ್ರೆಂಡ್ಸ್ ಸಂಘಟನೆಯು ಕನಿಷ್ಠ ಪಕ್ಷ ತಮ್ಮ ಗ್ರಾಮ ವ್ಯಾಪ್ತಿ ಯಲ್ಲಿ ಆದರೂ ಹಿಂದೂ ಸಮಾಜದ ಯಾವುದೇ ಒಂದು ಮನೆ ಮುಳಿಹುಲ್ಲಿನ ಮನೆ, ವಿದ್ಯುತ್ ಶಕ್ತಿ ಇಲ್ಲದ ಮನೆ, ಕನಿಷ್ಠ ಪಕ್ಷ ಮನೆಯಲ್ಲಿರುವ ವಿದ್ಯಾರ್ಥಿಗಳು ಪಿಯುಸಿ ತನಕ ವಿದ್ಯಾಭ್ಯಾಸ, ಯಾವುದೇ ರೋಗ ಬಾದೆಯಿಂದ ಔಷಧಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರದಂತೆ ನೋಡಿಕೊಳ್ಳಬೇಕು.

ಸಮಾಜದ ಒಳಿತಿಗಾಗಿ ರಕ್ತದಾನ,ಕಣ್ಣು ದಾನ, ಅಂಗಾಂಗ ದಾನಗಳ ಬಗ್ಗೆ ಪ್ರಚೋದಿಸಿ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಬೇಕು. ಆಧುನಿಕ ಆಡಂಬರಗಳನ್ನು ಬಿಟ್ಟು ಭಜನೆ ಸತ್ಕಾರ್ಯಗಳಂತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಂಘಟಕರು ಕಟ್ಟಡ ಲೋಕಾರ್ಪಣೆಯ ನಿಮಿತ್ತ ಯಾವುದೇ ಆಡಂಬರ ಕಾರ್ಯಕ್ರಮ ಮಾಡದೆ ಧಾರ್ಮಿಕ ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಅನ್ನದಾನದ ಮೂಲಕ ಕಾರ್ಯಕ್ರಮ ನಿರ್ವಹಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.


