ಪುತ್ತೂರು: ಹಿಂದೂ ಸಂಘಟನೆಯ ಹಲವು ಮುಖಂಡರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಇದನ್ನು ಹಿಂದು ಜಾಗರಣ ವೇದಿಕೆ ಪ್ರಬಲವಾಗಿ ವಿರೋಧಿಸಿದ್ದು, ಆಕ್ರೋಶ ವ್ಯಕ್ತಪಡಿಸಿದೆ.
ಸಿ.ಆರ್.ಪಿ.ಸಿ ಕಲಂ.107, 108, 109, 110ರ ಮೇರೆಗೆ ಪ್ರಕರಣ ದಾಖಲಿಸಿರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಿ 1 ವರ್ಷದ ಅವಧಿಯವರೆಗೆ ಶಾಂತಿಯನ್ನು ಕಾಪಾಡಿಕೊಳ್ಳಲು 1 ಲಕ್ಷಗಳ ಜಾಮೀನು ಸಹಿತ ಮುಚ್ಚಳಿಕೆಯನ್ನು ಬರೆದುಕೊಡಲು ನ್ಯಾಯಾಲಯದಿಂದ ಹಿಂದೂ ಮುಖಂಡಿಗೆ ನೋಟೀಸ್ ನೀಡಲಾಗಿತ್ತು. ಆದರೆ, ನ್ಯಾಯಾಲಯಕ್ಕೆ ಹಾಜರಾಗದೆ ಮುಚ್ಚಳಿಕೆಯನ್ನು ಬರೆದುಕೊಡದ ಹಿನ್ನೆಲೆಯಲ್ಲಿ ನೊಟೀಸ್ ಜಾರಿ ಮಾಡಲಾಗಿದೆ. ಪುತ್ತೂರು ನಗರ/ಗ್ರಾಮಾಂತರ/ ಉಪ್ಪಿನಂಗಡಿ ಠಾಣಾ ಸರಹದ್ದಿನಲ್ಲಿ ಶಾಂತಿಭಂಗ ಉಂಟು ಮಾಡುವ ಸಂಭವವಿದೆ ಎಂದು ಮನವರಿಕೆಯಾಗಿರುವುದರಿಂದ ಹಿಂದೂ ಮುಖಂಡರನ್ನು ಮಾ.7ರಂದು ದಸ್ತಗಿರಿ ಮಾಡಿ ಹಾಜರು ಪಡಿಸಬೇಕು ಎಂದು ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪುತ್ತೂರು ನಗರ/ಗ್ರಾಮಾಂತರ / ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ಆದೇಶ ಪ್ರತಿ ನೀಡಲಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಪುತ್ತೂರಿನ ಹಿಂದೂ ಸಂಘಟನೆ ಮುಖಂಡರ ವಿರುದ್ಧ ವಾರಂಟ್ ಜಾರಿಯಾಗಿರುವ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಸದೃಢ ಸಮಾಜಕ್ಕಾಗಿ ಪೊಲೀಸ್ ಇಲಾಖೆಗಳು ಮಾಡದ ಕಾರ್ಯಗಳನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಮಾಡುತ್ತಿದ್ದು ಅವರನ್ನು ಧಮನಿಸುವ ಕಾರ್ಯಗಳು ಇಲಾಖೆ ವತಿಯಿಂದ ನಡೆಸಲಾಗುತ್ತಿದೆ. ವಾರಂಟ್ ಜಾರಿ ಮಾಡಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಅವರಿಗೆ ಮಾನಸಿಕ ಕಿರುಕುಳ ನೀಡುವ ಕಾರ್ಯಗಳನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಜಾಗರಣ ವೇದಿಕೆ ಹೋರಾಟದ ಮೂಲಕ ಉತ್ತರ ನೀಡಲಿದೆ.
ಸಮಾಜದ ಶಾಂತಿ ಕದಡುವ ಕಾರ್ಯಗಳನ್ನು ಮಾಡುವವರನ್ನು ಬಂಧಿಸದೆ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಹೀಗೆ ಮುಂದುವರಿದರೆ ಮುಂದಾಗುವ ಎಲ್ಲಾ ಬೆಳವಣಿಗೆಗೆ ಇಲಾಖೆಯೇ ಕಾರಣವಾಗಿರುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹ ಸಂಚಾಲಕ್ ನರಸಿಂಹ ಶೆಟ್ಟಿ ಮಾಣಿ ಪ್ರತಿಕ್ರಿಯಿಸಿದ್ದಾರೆ.



























