ಮಂಗಳೂರು: ಮಲಾರ್ ಗ್ರಾಮದ ವೃದ್ಧರೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳ ಆರೋಪ ಸಾಬೀತಾಗಿದ್ದು, ಎಲ್ಲ 5 ಮಂದಿಯೂ ದೋಷಿಗಳು ಎಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಎಲ್ಲ 5 ಆರೋಪಿಗಳೂ ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕಾತಿ, ಶಿಕ್ಷೆಯ ಪ್ರಮಾಣವನ್ನು 2023ರ ಮಾರ್ಚ್ 3ನೇ ತಾರೀಕಿಗೆ ಕಾಯ್ದಿರಿಸಿದ್ದಾರೆ.
ಪಲ್ಲಿಯಬ್ಬ ಎಂಬ ವ್ಯಕ್ತಿಯನ್ನು ಮಲಾರ್ ಎಂಬಲ್ಲಿ ಹಣಕ್ಕಾಗಿ ಕತ್ತು ಹಿಸುಕಿ ಕೊಲ್ಲಲಾಗಿತ್ತು ಮತ್ತು ಕುಟುಂಬಸ್ಥರು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಪೋಲೀಸರು ತನಿಖೆ ನಡೆಸಿದಾಗ ಕೊಲೆ ಎಂದು ಸಾಬೀತಾಗಿತ್ತು.
ಮಲಾರ್ ಅಕ್ಷರ ನಗರ ನಿವಾಸಿ ಹಂಝ ಅಬ್ಬಾಸ್ (44), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಹಾಗೂ ಅಥಾವುಲ್ಲ ಯಾನೆ ಅಲ್ತಾಫ್ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪಾವೂರು ಗ್ರಾಮದ ಮಲಾರ್‌ನಿಂದ ಪಲ್ಲಿಯಬ್ಬ ಯಾನೆ ಪಲ್ಲಿಯಾಕ ನಾಪತ್ತೆಯಾದ ಬಗ್ಗೆ 2020ರ ಅ.29ರಂದು ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಪಲ್ಲಿಯಬ್ಬ ಎಂಬವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಇವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು.
ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು..