ಪುತ್ತೂರು: ತಾಲೂಕಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವರ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಈ ಬಗ್ಗೆ ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ ರವರು ಪ್ರತಿಕ್ರಿಯಿಸಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತಿಯು ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಮೊದಲು ಕೂಡ ಭಾರತೀಯ ಜನತಾ ಪಾರ್ಟಿಯ ತೆಕ್ಕೆಯಲ್ಲಿ ಇದೆ. ಈ ಚುನಾವಣೆಯಲ್ಲಿ ಜಯ ಸಾಧಿಸಿದ ಯತೀಶ್ ದೇವ ರವರು ವಿದ್ಯಾವಂತ ಹಾಗೂ ಸಾಮಾಜಿಕವಾಗಿ ಜನರನ್ನು ಸಂಪರ್ಕ ಮಾಡುವಂತ ಯೋಗ್ಯ ವ್ಯಕ್ತಿಯಾಗಿದ್ದಾರೆ.
ಪುತ್ತೂರು ತಾಲೂಕಿನ ಶಾಸಕರ, ಸಂಸದರ ಉತ್ತಮ ಕಾರ್ಯ ವೈಖರಿ ಹಾಗೂ ಪಂಚಾಯತಿಯ ಎಲ್ಲಾ ರೀತಿಯ ಅನುದಾನಗಳ ಸಮರ್ಪಕವಾದ ಬಳಕೆ, ಈ ಎಲ್ಲಾ ರೀತಿಯ ಸಾಧನೆಗಳು ಈ ಗೆಲುವಿಗೆ ಕಾರಣವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಆರ್ಯಾಪು ವಾರ್ಡ್ 4ರ ಸದಸ್ಯ ಗಿರೀಶ್ ಮರಿಕೆಯವರ ಮರಣದಿಂದ ತೆರವಾದ ಸ್ಥಾನಕ್ಕೆ ಫೆ.25 ರಂದು ಮತದಾನ ಪ್ರಕ್ರಿಯೆಗಳು ನಡೆದಿದ್ದು, ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 498 ಮತಗಳನ್ನು ಪಡೆದು, 327 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲ ರವರ ವಿರುದ್ಧ 171 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 11 ಮತಗಳು ತಿರಸ್ಕೃತಗೊಂಡಿದೆ.