ಪುತ್ತೂರು : ಕೊರೊನಾ ತಡೆಗಟ್ಟಲು ಮಾಸ್ಕ್ ಅನಿವಾರ್ಯ ಎಂಬ ಘೋಷಣೆ ಮೊಳಗುತ್ತಿರುವ ಹೊತ್ತಲ್ಲೇ ಮಾಸ್ಕ್ ನಲ್ಲಿ ದೇಸಿ ತಳಿ ಪ್ರವೇಶಿಸಿದೆ.
ಅರೇ ಇದೇನೂ ಎಂಬ ಅಚ್ಚರಿ ಉಂಟಾಗಬಹುದು, ಆದರೆ ಇದು ನಿಜ. ನಾನಾ ಕಡೆಗಳಲ್ಲಿ ಚಿನ್ನ, ವಜ್ರದಿಂದ ತಯಾರಿಸಿದ ಮಾಸ್ಕ್ ಧರಿಸಿರುವುದನ್ನು ಕೇಳಿದ್ದೇವೆ. ಪ್ರಕೃತಿಯಿಂದ ದೊರೆಯುವ ವಸ್ತು ಬಳಸಿ ಇದಕ್ಕಿಂತಲು ಗಟ್ಟಿಮುಟ್ಟಾಗಿರುವ ಮಾಸ್ಕ್ ಅನ್ನು ಧರಿಸಬಹುದು ಎನ್ನುವುದು ಇಲ್ಲಿ ನಿರೂಪಿತವಾಗಿದೆ. ಬಹುಮುಖ ಕಲಾವಿದನೋರ್ವನ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗೆರಟೆ ಮಾಸ್ಕ್ ಹೊಸ ಪ್ರಯೋಗ ಗ್ರಾಹಕರ ಗಮನ ಸೆಳೆದಿದೆ.
ತೆಂಗಿನಕಾಯಿಯ ಗೆರಟೆ ಬೆಂಕಿ ಉರಿಸಲಷ್ಟೇ ಲಾಯಕ್ಕು ಅನ್ನುವ ಯೋಚನೆ ನಮ್ಮದು. ಆದರೆ ಮರ್ಕಂಜದ ಚಿತ್ರ ಕಲಾವಿದ ಧನಂಜಯ ಅವರು ಭಿನ್ನವಾಗಿ ಚಿಂತಿಸಿ, ತನ್ನ ಕಲಾಪ್ರೌಢಿಮೆ ಸೇರಿಸಿ ಹಲವು ರೂಪಗಳಲ್ಲಿ ಗೆರಟೆಯನ್ನು ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಸಾಲಿಗೆ ಮಾಸ್ಕ್ ಹೊಸದಾಗಿ ಸೇರ್ಪಡೆಗೊಂಡಿದೆ.
ಗೆರಟೆ ಮಾಸ್ಕ್..! : ಸುಳ್ಯ ತಾಲೂಕಿನ ಮರ್ಕಂಜ ನಿವಾಸಿ, ಪ್ರಸ್ತುತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಧನಂಜಯ ಅವರು ಒಂದೇ ದಿನದಲ್ಲಿ ಮಾಸ್ಕ್ ತಯಾರಿಸಿದ್ದಾರೆ. ಎಕ್ಸ್ ರ್ ಬ್ಲೇಡ್ ಬಳಸಿ ಸಣ್ಣ ಸಣ್ಣ ಗೀರು, ತೂತು ಮಾಡಿ ಗಾಳಿ ಒಳ-ಹೊರ ಪ್ರವೇಶಕ್ಕೆ ಅನುವು ಮಾಡಲಾಗಿದೆ. ಅತ್ಯಂತ ಸೂಕ್ಷ್ಮ ಕೆಲಸ ಇದಾಗಿದ್ದು ಇದರಲ್ಲಿ ಯಶಸ್ವಿಯಾಗಿರುವ ಧನಂಜಯ ಅವರು ಗೆರಟೆಯ ಭಾರ ಇಳಿಸಿ ಮುಖಕ್ಕೆ ಆರಾಮದಾಯವಾಗಿ ಅಳವಡಿಸುವಂತೆ ನಯವಾಗಿ ಕೆತ್ತಿ ಸುಂದರ ರೂಪ ನೀಡಿದ್ದಾರೆ.
ಗೆರಟೆಯಲ್ಲಿ ಹಲವು ಪ್ರಯೋಗ : ಈಗಾಗಲೇ ಗೆರಟೆಯಲ್ಲಿ ಕೈ ಬಳೆ, ಪೆನ್ ಸ್ಟಾಂಡ್, ಮೊಬೈಲ್ ಸ್ಟಾಂಡ್, ಕುಂಕುಮ ಬಾಕ್ಸ್, ಮೇಣದ ಬತ್ತಿ ಸ್ಟಾಂಡ್, ಪತ್ರ ಸಂಗ್ರಹದ ಬಾಕ್ಸ್, ಮೀನಿನ ಆಕೃತಿ, ಉಪ್ಪಿನಕಾಯಿ ಭರಣಿ, ಚಮಚ, ಆಭರಣ ಪೆಟ್ಟಿಗೆ, ಉಂಗುರ ಮೊದಲಾದವುಗಳನ್ನು ತಯಾರಿಸಿದ್ದಾರೆ. ತನ್ಮೂಲಕ ಮೂಲೆ ಸೇರುತ್ತಿದ್ದ ಗೆರಟೆಯ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.
ಗೆರಟೆ ಅತ್ಯಂತ ಬಹುಪಯೋಗಿ ವಸ್ತುವಾಗಿದ್ದು ಅದರಲ್ಲಿ ಹತ್ತಾರು ಬಗೆಯ ವಸ್ತುಗಳ ತಯಾರಿಸುವ ಹವ್ಯಾಸ ಹೊಂದಿದ್ದೇನೆ. ಒಂದು ದಿನದ ಶ್ರಮ ವಹಿಸಿ ಗೆರಟೆ ಮಾಸ್ಕ್ ತಯಾರಿಸಿದ್ದೇನೆ. ಆರಾಮದಾಯಕವಾಗಿ ಬಳಸಬಹುದು.
ಧನಂಜಯ ಮರ್ಕಂಜ
ಗೆರಟೆ ಮಾಸ್ಕ್ ತಯಾರಿಸಿದ ಕಲಾವಿದ