ಹಾಸನದಲ್ಲಿ ಇನ್ನೊಂದೇ ವಾರಕ್ಕೆ ಹಸೆಮಣೆ ಏರಬೇಕಿದ್ದ ಮದುಮಗಳು ಅಂದವಾಗಿ ಕಾಣಿಸಬೇಕು ಅಂತಾ ಮಾಡಿಸಿದ ಅದೊಂದು ಫೇಷಿಯಲ್ ಆಕೆಯ ಬಾಳಿನಲ್ಲಿ ಅಲ್ಲೋಲ ಕಲ್ಲೋಲವನ್ನೇ ಮಾಡಿದೆ. ನಿಶ್ಚಯವಾಗಿದ್ದ ಮದುವೆಯೇ ರದ್ದಾಗಿದ್ದರೆ, ಆಕೆ ಆಸ್ಪತ್ರೆ ಸೇರಿ ಪರದಾಡಿದ್ದಾಳೆ. ಒಂದು ಮೇಕಪ್ ಎರಡು ಕುಟುಂಬಗಳನ್ನ ಕಣ್ಣೀರಿಡುವಂತೆ ಮಾಡಿದ್ದು ಅಷ್ಟಕ್ಕೂ ಈ ಮೇಕಪ್ ಸ್ಟೋರಿಯಲ್ಲಿ ಆಗಿದ್ದೇನು, ಮದುವೆ ನಿಂತಿದ್ದು ಯಾಕೆ..!!?? ಈ ಸ್ಟೋರಿ ನೋಡಿ..
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ನಡೆದಿರೋ ಇದೊಂದು ಘಟನೆ ಇಡೀ ದೇಶದಲ್ಲಿ ಸದ್ದು ಮಾಡುತ್ತಿದೆ.
ಈಗ ಮನೆಯ ಯಾವುದೇ ಕಾರ್ಯಕ್ರಮ ಇರಲಿ, ಮದುವೆ ಇರಲಿ.. ಎಂತಹುದೇ ಶುಭ ಸಮಾರಂಭ ಇರಲಿ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗೋದು.. ಅಲ್ಲಿ ಫೇಷಿಯಲ್ ಅಂತಾ ಕಾಂತಿ ಹೆಚ್ಚಿಸಿಕೊಳ್ಳೋ ಟ್ರೀಟ್ಮೆಂಟ್ ಮಾಡಿಸಿಕೊಳ್ಳೋದು ಮಾಮೂಲಿ.., ಇನ್ನು ಮದುಮಗಳು ಅಂದ್ರೆ ಕೇಳಬೇಕಾ..!!? ಅರಸೀಕೆರೆ ತಾಲೂಕಿನ ಆ ಯುವತಿಗೆ ಮಾರ್ಚ್ 2ಕ್ಕೆ ಮದುವೆ ನಿಶ್ಚಯವಾಗಿತ್ತು.
ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಮದುಮಗಳು ಅರಸೀಕೆರೆ ನಗರದ ಅದೊಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಮದುವೆ ದಿನದ ಮೇಕಪ್ ಗೆ ಆರ್ಡರ್ ಮಾಡಿ, 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಫೇಷಿಯಲ್ ಮಾಡಿಸಿಕೊಂಡಿದ್ದರು. ಮುಖ ಸ್ವಲ್ಪ ಫೇರ್ ಆಗಲಿ ಅಂತಾ ಮಾಡಿದ ಫೇಷಿಯಲ್ ಮರುದಿನ ಆಕೆಯ ಮುಖವನ್ನೇ ವಿಕಾರ ಮಾಡಿಬಿಟ್ಟಿದೆ.
ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದ್ದು ಮದುಮಗಳು ಹಾಗೂ ಇಡೀ ಕುಟುಂಬ ಆತಂಕಗೊಂಡಿದೆ. ಕೂಡಲೆ ಅರಸೀಕೆರೆಯ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿದ್ದರಿಂದ ನಿಶ್ಚಯವಾಗಿದ್ದ ಮದುವೆ ದಿನಾಂಕವನ್ನು ರದ್ದುಮಾಡಿ ಮದುವೆಯನ್ನ ಮುಂದೂಡಲಾಗಿದೆ.
ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂದಾನದಿಂದ ಪ್ರಕರಣ ಇತ್ಯರ್ಥವಾಗಿದೆಯಾದರೂ ನಡೆದಿರೋ ಘಟನೆಯ ಫೋಟೋಗಳು, ಎಲ್ಲೆಡೆ ವೈರಲ್ ಆಗುತ್ತಿದೆ.