ಕಾಸರಗೋಡು: ಕಸಾಯಿಖಾನೆಗೆ ತಂದ ಕೋಣವೊಂದು ನಡೆಸಿದ ದಾಂಧಲೆಯಲ್ಲಿ ಯುವಕನೋರ್ವ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ಅಂಗಡಿಗಳಿಗೆ ಹಾನಿಯಾದ ಘಟನೆ ಮೊಗ್ರಾಲ್ ಪುತ್ತೂರು ಕಡವತ್ತ್ ನಲ್ಲಿ ನಡೆದಿದೆ.
ಲಾರಿಯಿಂದ ಕೋಣವನ್ನು ತಂದಿಳಿಸಿದಾಗ ಅದರ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಓಡ ತೊಡಗಿತು. ಅದನ್ನು ಹಿಡಿಯಲು ಓಡಿದ ವಿಜಯನಗರದ ಎನ್‌ಎಚ್ ರಸ್ತೆಯ ರಝಾಕ್ ಸಾಬ್ ಅವರ ಪುತ್ರ ಸಾದಿಕ್ (22) ಗೆ ಕೋಣ ಕೊಂಬಿನಿಂದ ಇರಿಯಿತು. ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯರು ತತ್‌ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಆ ಬಳಿಕವೂ ಪರಾಕ್ರಮ ಮುಂದುವರಿಸಿದ ಕೋಣ ಪರಿಸರದಲ್ಲಿದ್ದ ಹಲವರಿಗೆ ಹಾಯ್ದು ಗಾಯಗೊಳಿಸಿತು. ಅಲ್ಲೇ ಪಕ್ಕದ ಮನೆ ಬಳಿ ಆಟ ಆಡುತ್ತಿದ್ದ ಮುಜೀಬ್ ಎಂಬವರ ಪುತ್ರಿ ಹೈರಾಫತ್ (4) ಮೇಲೂ ಹಾಯ್ದ ಕಾರಣ ಆಕೆಯ ಕೆಲವು ಹಲ್ಲುಗಳು ಉದುರಿ ಹೋಗಿವೆ. ಕೋಣದ ದಾಳಿಯಲ್ಲಿ 25ರಷ್ಟು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಕೋಣವನ್ನು ಮೃತ ಸಾದಿಕ್ ಮತ್ತು ಆತನ ತಂದೆ ರಝಾಕ್ ಸಾಬ್ ಕರ್ನಾಟಕದಿಂದ ಲಾರಿಯಲ್ಲಿ ಮೊಗ್ರಾಲ್ ಪುತ್ತೂರಿಗೆ ತಂದಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.