ಬೆಂಗಳೂರು: ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ದೂರನ್ನು ನೀಡಿದ ಪ್ರಕರಣ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಮ್ರಾನ್ ಖಾನ್ ಎಂಬಾತ ತನ್ನ ಹೆಂಡತಿ ಆಯೇಷಾ ವಿರುದ್ಧ ದೂರು ದಾಖಲಿಸಿದ್ದಾನೆ. ರಾತ್ರಿ ಮಲಗಿದರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ. ಸಂಜೆ 5-30ಕ್ಕೆ ಮಲಗಿದ್ರೆ ರಾತ್ರಿ 9-30 ಕ್ಕೆ ಏಳುತ್ತಾಳೆ. ಮದುವೆಯಾಗಿ ಐದು ವರ್ಷವಾಯ್ತು ಅಂದಿನಿಂದ ಇಲ್ಲಿವರೆಗೆ ಇದೇ ರೀತಿ ವರ್ತಿಸುತ್ತಿದ್ದಾಳೆ.
ಅಡುಗೆ ಸಹ ಮಾಡದೇ ನಿದ್ದೆ ಮಾಡುತ್ತಿದ್ದು, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ಅವಳು ಇಷ್ಟೆಲ್ಲಾ ಮಾಡಿದ್ರೂ ನಾನು ಪ್ರಶ್ನಿಸದೆ ಸುಮ್ಮನಿದ್ದೆ. ಆದರೆ ಆಕೆಯ ಕುಟುಂಬಸ್ಥರೆಲ್ಲಾ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಹೀಗಾಗಿ ನಾನು ಸಾಕಷ್ಟು ನೊಂದಿದ್ದು,ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ನನ್ನನ್ನು ಆಯೇಷಾ ಫರ್ಹಿನ್ ಮದ್ವೆಯಾಗಿದ್ದು, ಮದುವೆಗೂ ಮುನ್ನವೇ ಆಕೆಗೆ ಕಾಯಿಲೆಗಳಿದ್ದವು. ಅವುಗಳನ್ನು ಮರೆಮಾಚಿ ತನಗೆ ಐದು ವರ್ಷದ ಹಿಂದೆ ಮದುವೆ ಮಾಡಿ ಕೊಟ್ಟಿದ್ದಾರೆ. ಆಕೆಯ ಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನು ಮನೆಗೆ ಆಹ್ವಾನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ನನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ.
ಆಕೆಗೆ ನನ್ನ ಬಗ್ಗೆ ಬಗ್ಗೆ ಕಿಂಚಿತ್ತೂ ಪ್ರೀತಿ,ಮಮಕಾರವಿಲ್ಲ. ನನ್ನ ಆಸ್ತಿ ಲಪಟಾಯಿಸಲು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆಂದು ಪತ್ನಿ ಆಯೇಷಾ, ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ನೊಂದ ಕಮ್ರಾನ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.