ಪುತ್ತೂರು: ಫುಲ್ವಾರಿ ಶರೀಫ್‌ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿರುವ ಆರೋಪದಡಿ ಎನ್‌ಐಎ ಬಂಧಿಸಿರುವ ಐವರು ಕಳೆದ ಜುಲೈಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹಂತಕರಿಗೂ ಹಣ ಸಂದಾಯ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಜುಲೈಯಲ್ಲಿ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂತಕರಿಗೆ ಹಣಕಾಸು ನೆರವು ನೀಡಿದ್ದರಲ್ಲಿ ಫುಲ್ವಾರಿ ಪ್ರಕರಣದಲ್ಲಿ ಬಂಧಿತರಾಗಿರುವ ಪುತ್ತೂರು, ಬಂಟ್ವಾಳದ ಐವರ ಪಾತ್ರ ಇರುವುದು ತನಿಖೆಯ ವೇಳೆ ಕಂಡುಬಂದಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಎನ್‌ಐಎ ತನ್ನ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆ.11 ರಂದು ಬಂಧಿಸಲಾದ ಪ್ರಮುಖ ಮೂವರು ಆರೋಪಿಗಳ ಪೈಕಿ ಓರ್ವನಾಗಿರುವ ಅಂಕತ್ತಡ್ಕ ನಿವಾಸಿ ರಿಯಾಜ್ ಮನೆಯಲ್ಲಿದ್ದ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭ ಆತನ ಖಾತೆಗೆ ಹಣ ಸಂದಾಯ ಆಗಿರುವ ಅಂಶ ಕಂಡುಬಂದಿತ್ತು.