ಪುತ್ತೂರು : ಅಪರಿಚಿತ ವ್ಯಕ್ತಿಯೋರ್ವ ಹತ್ತು ಲಕ್ಷ ರೂ ಹಣ ದೋಚಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ-ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಡೆದಿರುವ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಎಂಬವರು ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟಿದ್ದ 10,00,000 ರೂ. ನಗದು ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ತುಂಬಿಸಿ ಸ್ಕೂಟರ್ ನ ಸೀಟಿನ ಅಡಿಯಲ್ಲಿ ಇರಿಸಿ ಅವರ ಪತ್ನಿಯೊಂದಿಗೆ ಉಪ್ಪಿನಂಗಡಿ ಜ್ಯುವೆಲ್ಲರಿ ಶಾಪ್ ಗೆ ಹೋಗುತ್ತಿರುವಾಗ ದಾರಿಯ ಮಧ್ಯೆ ಸರಳಿಕಟ್ಟೆಯ ಕಂಪ್ಲೋಡಿ ಎಂಬಲ್ಲಿರುವ ಮಹಮ್ಮದ್ ರವರ ಅತ್ತೆ ಬಿಫಾತುಮ್ಮ ಎಂಬವರು ಮರಣ ಹೊಂದಿರುವ ಮಾಹಿತಿ ತಿಳಿದು ಸರಳಿಕಟ್ಟೆಗೆ ಸ್ಕೂಟರನ್ನು ತಿರುಗಿಸಿ ಪೆದಮಲೆಯಿಂದ ಸರಳಿಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಸ್ಕೂಟರ್ ನಿಂದ ಆಯ ತಪ್ಪಿ ಮಹಮ್ಮದ್ ಮತ್ತು ಅವರ ಪತ್ನಿ ರಸ್ತೆಗೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದರು.
ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಟೋ ರಿಕ್ಷಾದಲ್ಲಿ, ಸ್ಕೂಟರಿನಲ್ಲಿದ್ದ ಹಣದ ಕಟ್ಟನ್ನು ಹಿಡಿದುಕೊಂಡು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಸ್ಸು ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಮಹಮ್ಮದ್ ಅವರು ಹೆಂಡತಿಯನ್ನು ಮನೆಗೆ ಬಿಟ್ಟು ಹಣದ ಕಟ್ಟಿನೊಂದಿಗೆ ವಾಪಸ್ಸು ಅದೇ ರಿಕ್ಷಾದಲ್ಲಿ ಸ್ಕೂಟರ್ ಬಿದ್ದ ಸ್ಥಳಕ್ಕೆ ಬಂದು ಕೈಯಲ್ಲಿದ್ದ ಹಣದ ಕಟ್ಟನ್ನು ಸ್ಕೂಟರ್ ನ ಸೀಟಿನಡಿಯಲ್ಲಿರುವ ಬಾಕ್ಸ್ ನಲ್ಲಿ ಇಡುತ್ತಿದ್ದಂತೆಯೇ ಓರ್ವ ಅಪರಿಚಿತ ವ್ಯಕ್ತಿ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋದ ಘಟನೆ ನಡೆದಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























