ಮಡಿಕೇರಿ: ಮನೆಯಲ್ಲಿ ಆಟವಾಡುತ್ತಿದ್ದಾಗ 8 ತಿಂಗಳ ಮಗುವೊಂದು ಉಂಗುರ ನುಂಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನೀರ್ ಎಂಬವರ ಮಗು ಮೃತಪಟ್ಟಿದೆ.
8 ತಿಂಗಳ ಮಗು ಬುಧವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು. ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ರಾತ್ರಿ 9 ಗಂಟೆಯಿಂದ ಸುಮಾರು 12 ಗಂಟೆಯವರೆಗೆ ನಿರಂತರವಾಗಿ ಶ್ರಮಪಟ್ಟು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ಹೊರತೆಗೆಯಲಾಗಿದೆ. ಆದರೇ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮಗು ಮೃತಪಟ್ಟಿದೆ.


























