ಅನಧಿಕೃತವಾದ ಜಾಹೀರಾತು ಮತ್ತು ಫಲಕಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ 2023 ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಉಲ್ಲೇಖ ಅಧಿಕೃತ ಜ್ಞಾಪನದಲ್ಲಿ ಅನಧಿಕೃತ ಜಾಹೀರಾತು ಮತ್ತು ಘಟಕಗಳನ್ನು ತೆರವುಗೊಳಿಸುವುದರ ಬಗ್ಗೆ ಮುಖ್ಯ ಚುನಾವಣಾಧಿಕಾರಿಯವರು ನಿರ್ದೇಶನವನ್ನು ನೀಡಿರುತ್ತಾರೆ. ಕಚೇರಿಯ ಅಧಿಕೃತ ಜ್ಞಾಪನದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನುಮತಿಯನ್ನು ಪಡೆಯದೆ ಹಾಕಲಾಗಿರುವ ಬ್ಯಾನರ್-ಬಂಟಿಂಗ್ಸ್ ಗಳು ಮತ್ತು ಫ್ಲೆಕ್ಸ್ ಗಳು, ಗೋಡೆಬರಹಗಳು ಮತ್ತು ಇತರ ಜಾಹೀರಾತುಗಳನ್ನು ತೆರವುಗೊಳಿಸಲು ಸೂಚಿಸಲಾಗಿತ್ತು.
ಆದಾಗ್ಯೂ ಜಿಲ್ಲೆಯಲ್ಲಿ ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನಧಿಕೃತವಾಗಿ ಅನುಮತಿ ಪಡೆಯದೆ ಬ್ಯಾನರ್-ಬಂಟಿಂಗ್ಸ್ ಗಳು ಮತ್ತು ಪಕ್ಷಗಳು, ಗೋಡೆಬರಹಗಳು ಮತ್ತು ಇತರ ಜಾಹೀರಾತುಗಳು ಜಿಲ್ಲೆಯಲ್ಲಿ ಎಲ್ಲಾ ಭಾಗಗಳಲ್ಲಿ ಕಂಡು ಬಂದಿರುತ್ತದೆ. ಇದು ಕರ್ನಾಟಕ ತೆರೆದ ಸ್ಥಳಗಳು ಕಾಯ್ದೆ 1981ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಈಗಾಗಲೇ ಸೂಚಿಸಿದ್ದರೂ ಸದರಿ ಬ್ಯಾನರ್ ಗಳನ್ನು ತೆರವುಗೊಳಿಸದೇ ಇರುವುದು ಅತ್ಯಂತ ಗಂಭೀರ ವಿಷಯವಾಗಿ ಪರಿಗಣಿಸಲಾಗಿದೆ.
ಆದ್ದರಿಂದ ಸದರಿ ವಿಷಯದ ಕುರಿತು ಸ್ಥಳೀಯ ಸಂಸ್ಥೆಗಳ ಮಹಾನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳ ಮುಖ್ಯಸ್ಥರು ಈ ಬಗ್ಗೆ ಖುದ್ದಾಗಿ ಗಮನಹರಿಸಿ ಎಲ್ಲಾ ಅನಧಿಕೃತ ಬ್ಯಾನರ್-ಬಂಟಿಂಗ್ಸ್ಗಳು ಮತ್ತು ಫ್ಲೆಕ್ ಗಳು, ಗೋಡೆಬರಹಗಳು ಮತ್ತು ಇತರ ಜಾಹಿರಾತುಗಳನ್ನು ಮಾ.24 ರಂದು ಸಂಜೆ 3.00 ಗಂಟೆಯೊಳಗೆ ತೆರವುಗೊಳಿಸಿ ಅದೇ ದಿನ ಸಂಜೆ.5.00 ಗಂಟೆಯೊಳಗೆ ತಪ್ಪದೇ ವರದಿ ಹಾಗೂ ದೃಢೀಕರಣ ಪತ್ರವನ್ನು ಕಚೇರಿಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ..


























