ಸುಳ್ಯ: ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಜಗಳ ಆರಂಭವಾಗಿ ಮಾತಿಗೆ ಮಾತು ಬೆಳೆದು ತಂದೆ ಮಗನನ್ನು ಕೊಂದ ಘಟನೆ ಕಳೆದ ರಾತ್ರಿ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದ್ದು, ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶಿವರಾಮ (32) ಮೃತರು.

ಶಿವರಾಮ ರವರ ತಂದೆ ಶೀನ ಆರೋಪಿ.
ಶಿವರಾಮ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಮದ್ಯ ಸೇವಿಸುವ ಅಭ್ಯಾಸವಿದ್ದು, ಕೆಲಸದಿಂದ ಬರುವಾಗ ಮದ್ಯ ಸೇವಿಸಿಕೊಂಡು ಬರುತ್ತಿದ್ದು, ದಿನ ನಿತ್ಯ ಮನೆಯಲ್ಲಿ ಊಟ ಮಾಡುವ ಸಮಯ ಪದಾರ್ಥ ಸರಿ ಇಲ್ಲ ಎಂದು ತಂದೆ, ತಾಯಿ ಹಾಗೂ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು.
ನಿನ್ನೆ ತಡರಾತ್ರಿ ಮನೆಗೆ ಆಗಮಿಸಿದ ಶಿವರಾಮ್ ಊಟ ಮಾಡುವ ಸಮಯ ಹಿಂದಿನ ದಿನ ಮಾಡಿದ ಕೋಳಿ ಪದಾರ್ಥ ಇಲ್ಲವೇ ಎಂದು ತಾಯಿಯ ಬಳಿ ಕೇಳಿದಾಗ ಕೋಳಿ ಪದಾರ್ಥ ಮುಗಿದಿರುತ್ತದೆ ಎಂದು ಹೇಳಿದಾಗ ಕೋಪಗೊಂಡು “ನನಗೆ ಈಗಲೇ ಕೋಳಿ ಪದಾರ್ಥ ಬೇಕು” ಎಂದು ಹೇಳಿದ್ದು, ಕೋಳಿ ತಂದು ಕೊಟ್ಟರೆ ಪದಾರ್ಥ ಮಾಡಿ ಕೊಡುವುದಾಗಿ ತಾಯಿ ತಿಳಿಸಿದ್ದು, ಶಿವರಾಮ ರವರು ಸ್ವಲ್ಪ ದೂರ ಹೋಗಿ ವಾಪಸ್ಸು ಬಂದು ಮನೆಯಲ್ಲಿ ಇದ್ದ ಕೋಳಿಯನ್ನು ಹಿಡಿಯಲು ಹೋದಾಗ ಆ ಕೋಳಿ ಓಡಿ ಹೋಗಿದ್ದು, ಮನೆಯಲ್ಲಿ ಬೊಬ್ಬೆ ಕೇಳುತ್ತಿದ್ದುದ್ದನ್ನು ಕಂಡು ನೆರೆಮನೆಯವರು ಮನೆಯ ಹತ್ತಿರ ಬಂದಿದ್ದರು. ಕೋಳಿ ಓಡಿಸುತ್ತಿರುವುದನ್ನು ಕಂಡ ಶಿವರಾಮ ರವರ ತಂದೆ ಶೀನ ರವರು ಯಾಕೆ ಕೋಳಿ ಓಡಿಸುವುದು ಎಂದು ಹೇಳಿದಾಗ ಅವರೊಳಗೆ ಜಗಳವಾಗಿ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಶಿವರಾಮ ರವರ ತಲೆಗೆ ಶೀನ ರವರು ಹೊಡೆದಿದ್ದು, ಗಂಭೀರ ಗಾಯಗೊಂಡ ಶಿವರಾಮ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ ನಂಬ್ರ 23-2023, ಕಲಂ:302 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ. ಆರೋಪಿ ಶೀನರನ್ನು ಪೊಲೀಸರು ಬಂಧಿಸಿದ್ದಾರೆ.
























