ಪುತ್ತೂರು : ಮಾಯಿ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕಷ್ಟ ಮರಣದ ಕಥಾಪ್ರಸಂಗವನ್ನು ಲಾರೆನ್ಸ್ ಮಸ್ಕರೇನ್ಹಸ್, ಸ್ಟ್ಯಾನಿ ಪಿಂಟೋ, ಅಶೋಕ್ ರಾಯನ್ ಕ್ರಾಸ್ತಾ ರವರು ರಾಗಭರಿತವಾಗಿ ಓದಿದರು.

ಕೆವಿನ್ ಲಾರೆನ್ಸ್ ಡಿಸೋಜಾ ರವರು ಪ್ರವಚನದಲ್ಲಿ ಶಿಲುಬೆಯಿಂದಲೇ ಜಯ. ಶಿಲುಬೆಯೇ ಜಯದ ಸಾಧನ. ಶಿಲುಬೆಯಿಂದಲೇ ಮನುಕುಲಕ್ಕೆ ಆಶೀರ್ವಾದ. ಕ್ರಿಸ್ತ ಪೂರ್ವದಲ್ಲಿ ಅಪರಾಧಿಗಳಿಗೆ ಶಿಲುಬೆಯ ಮರಣವನ್ನು ಶಿಕ್ಷೆಯನ್ನಾಗಿ ಕೊಡುತ್ತಿದ್ದರು. ಆದರೆ ನಿರಪರಾಧಿ ಯೇಸುವು ಶಿಲುಬೆಯ ಮರಣದ ಮುಖಾಂತರ ಮಾನವ ಸಂಕುಲಕ್ಕೆ ಮುಕ್ತಿಯನ್ನು ತಂದರು ಎಂದು ಸಂದೇಶ ನೀಡಿದರು.
ಇಡೀ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಸಮುದಾಯವನ್ನು ನಡೆಸುವ ಪೋಪ್ ಫ್ರಾನ್ಸಿಸ್, ದೇಶವನ್ನು ನಡೆಸುವ ರಾಜಕಾರಣಿಗಳು, ಧಾರ್ಮಿಕ ಮುಖಂಡರುಗಳ ಒಳಿತಿಗೆ, ಇಡೀ ಮನುಜ ಕುಲಕ್ಕೆ ಒಳ್ಳೆಯದಾಗಲಿ, ಒಳ್ಳೆಯದನ್ನು ಮಾಡಲು ಆ ದೇವರು ಆಶೀರ್ವದಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಎಲ್ಲಾ ಭಕ್ತಾದಿಗಳಿಗೆ ಶಿಲುಬೆಯನ್ನು ಮುಟ್ಟಿ ನಮಸ್ಕರಿಸಲು ಅನುವು ಮಾಡಿ ಕೊಡಲಾಯಿತು. ಈ ಸಮಯದಲ್ಲಿ ಒಟ್ಟು ಗೂಡಿದ ಕಾಣಿಕೆ ಹಣವನ್ನು ರೋಗಿಗಳಿಗೆ ಮತ್ತು ಒಂದು ಹೊತ್ತು ಆಹಾರ ವಿಲ್ಲದ ಬಡಜನರಿಗೆ ಇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ಯೇಸುವಿನ ಪಾರ್ಥಿವ ಶರೀರವಿರುವ ತೊಟ್ಟಿಲು ಮತ್ತು ದುಃಖ ತಪ್ತ ಮೇರಿ ಮಾತೆಯ ವಿಗ್ರಹವನ್ನು ಚರ್ಚ್ ವಠಾರದಿಂದ ಕೋರ್ಟ್ ರಸ್ತೆಯ ಮೂಲಕ ಮಹಮ್ಮಾಯಿ ದೇವಸ್ಥಾನದ ಮಾರ್ಗವಾಗಿ ಚರ್ಚ್ ವಠಾರಕ್ಕೆ ತರಲಾಯಿತು. ಭಕ್ತಾದಿಗಳಿಗೆ ವೀಕ್ಷಣೆಗೆ ಅನುವು ಮಾಡಿ ಕೊಟ್ಟು ತೊಟ್ಟಿಲಿಗೆ ಹಾಕಿದ ಹೂಗಳನ್ನು ಪ್ರತಿಯೊಬ್ಬರ ಮನೆಗೆ ತೆಗೆದುಕೊಂಡು ಹೋದರು.

ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು. ಬೆಳಿಗ್ಗೆ 7.15ರಿಂದ 8.45ರ ತನಕ ಶಿಲುಬೆ ಹಾದಿಯನ್ನು ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.






























