ಉಡುಪಿ: 2023ರ ಎಲೆಕ್ಷನ್ ಕಣದಲ್ಲಿ ಬಿಜೆಪಿಯ ಟಿಕೆಟ್ ಘೋಷಣೆಯು ಭಾರೀ ಅಚ್ಚರಿ ಮೂಡಿಸಿದೆ. ಯಾರೂ ಊಹಿಸದಂತ ಅಭ್ಯರ್ಥಿಗಳನ್ನು ಬಿಜೆಪಿ ಚುನಾವಣಾ ಸ್ಪರ್ಧೆಗಿಳಿಸುತ್ತಿದೆ.
ಸದ್ಯ ಇದೀಗ ಬೈಂದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಗೂ ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಬಿಜೆಪಿ ಬಿಗ್ ಶಾಕ್ ಕೊಟ್ಟಿದೆ. ಇವರ ಬದಲಿಗೆ ಸಾಮಾನ್ಯ ಕಾರ್ಯಕರ್ತ ಗುರುರಾಜ್ ಘಂಟಿಹೊಳೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಆರ್.ಎಸ್.ಎಸ್. ಹಿನ್ನೆಲೆಯುಳ್ಳ ಗುರುರಾಜ್ ಘಂಟಿಹೊಳೆ, ಈಶಾನ್ಯ ರಾಜ್ಯದಲ್ಲಿ ಮತಾಂತರ, ಉಗ್ರರ ಉಪಟಳ ಹೆಚ್ಚಳದಿಂದಾಗಿ ಮಣಿಪುರದ ಮಕ್ಕಳನ್ನು ಕರ್ನಾಟಕಕ್ಕೆ ಕರೆತಂದು ಶಿಕ್ಷಣ ಕೊಡಿಸಿದ್ದರು. ತಮ್ಮ ಮನೆಯಲ್ಲೇ 50ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಬಿಜೆಪಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿದ್ದೇವೆ ಎಂಬ ಸಂದೇಶ ಬಿಜೆಪಿ ರವಾನಿಸಿದೆ. ಗುರುರಾಜ್ ಘಂಟಿಹೊಳೆ ಬೈಂದೂರಿಗೆ ಬಡವರ ಮನೆ ಹುಡುಗ, ‘ಬರಿಗಾಲಿನ ಸಂತ’, ‘ಗುರು ಅಣ್ಣ’ ಎಂದು ಖ್ಯಾತಿ ಪಡೆದಿದ್ದಾರೆ.
ಗುರುರಾಜ ಶೆಟ್ಟಿ ಘಂಟಿಹೊಳೆ ಅವರು ಜನಿಸಿದ್ದು, ಉಡುಪಿಯ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಘಂಟಿಹೊಳೆಯಲ್ಲಿ. ಇವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಉಪ್ಪುಂದದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗಲು ಆರಂಭಿಸಿದರು. ನಂತರ ಉನ್ನತ ವ್ಯಾಸಂಗಕ್ಕೆ ಮಂಗಳೂರಿಗೆ ಆಗಮಿಸಿದಾಗ ಆರ್‌ಎಸ್‌ಎಸ್‌ನೊಂದಿಗಿನ ಒಡನಾಟ ಮತ್ತಷ್ಟು ಗಾಢವಾಯಿತು.
ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ಪೂರ್ಣಾವಧಿ ಪ್ರಚಾರಕರು ಎಂದರೆ ತಮ್ಮಮನೆ, ಉದ್ಯಮವನ್ನು ತೊರೆದು ಆರ್‌ಎಸ್‌ಎಸ್ ಎಲ್ಲಿ ಹೇಳುತ್ತದೆಯೋ ಅಲ್ಲಿಗೆ ತೆರಳಿ ಸಂಘಟನೆಯ ಕಾರ್ಯ ನಿರ್ವಹಣೆ ಮಾಡಲು ಮುಂದಾದರು.
ಈ ರೀತಿ 10 ವರ್ಷ ಪ್ರಚಾರಕರಾಗಿದ್ದ ನಂತರ ತಮ್ಮೂರಿಗೆ ವಾಪಸ್ ಆದರು. ಆ ನಂತರ ಉಡುಪಿಯ ಬಿಜೆಪಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನಿರ್ವಹಿಸಿದರು. ಈ ನಡುವೆ ಉದ್ಯಮ ಆರಂಭಿಸಿ 100 ಜನರಿಗೆ ಕೆಲಸ ಕೊಟ್ಟರು. ಉದ್ಯಮ ವಿಸ್ತರಣೆ ಸಂದರ್ಭದಲ್ಲಿ ಹಿನ್ನಡೆಯಾಗಿ ಅಲ್ಲಿಂದ ಹೊರ ಬಂದರು. ನಂತರ ಸಂಪೂರ್ಣ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡು ಈಶಾನ್ಯ ರಾಜ್ಯಗಳ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರು.
ಇದೆಲ್ಲದರ ಜೊತೆಜೊತೆಗೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರಾದ ಗುರುರಾಜ ಶೆಟ್ಟಿ ಘಂಟಿಹೊಳೆ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. 2 ಕೃತಿಗಳನ್ನು ರಚಿಸಿದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದ ಹೊಣೆ ನಿಭಾಯಿಸಿದರು.


























