ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರು ದಕ್ಷಿಣ ಠಾಣೆ ಮತ್ತು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 5.400 ಕೆ.ಜಿ. ಗಾಂಜಾ ಮತ್ತು 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮೂಲತಃ ಬೀದರ್‌ನವನಾಗಿದ್ದು ಗೋರಿಗುಡ್ಡ ಚರ್ಚ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪ್ರಜ್ವಲ್ ಫಿನೆಹಾಸ್ (26), ಮೂಲತಃ ಸಕಲೇಶಪುರ ಬೈಕರವಳ್ಳಿಯವನಾಗಿದ್ದು ಕುಲಶೇಖರದಲ್ಲಿ ವಾಸವಿದ್ದ ಧ್ರುವ ಶೆಟ್ಟಿ (19), ಕುಳಾಯಿ ನಿವಾಸಿ ಶಿವಾನಿ (22) ಬಂಧಿತ ಆರೋಪಿಗಳು.

ಪಿಎಸ್‌ಐ ಶೀತಲ್ ಅಲಗೂರು ಅವರಿಗೆ ಬಂದ ಮಾಹಿತಿ ಮೇರೆಗೆ ಆರೋಪಿ ಪ್ರಜ್ವಲ್ ಫಿನೆಹಾನ್ ಎಂಬಾತನನ್ನು ಬಂಧಿಸಿ ಆತ ನೀಡಿದ ಮಾಹಿತಿ ಆಧಾರದಿಂದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್ ಫಿನೆಹಾನ್ ಗಾಂಜಾವನ್ನು ಮಹಾರಾಷ್ಟ್ರದಿಂದ ಖರೀದಿ ಮಾಡಿಕೊಂಡು ಬಂದು ಮಂಗಳೂರಿನಲ್ಲಿ ಆತನ ಸ್ನೇಹಿತರಾದ ಧ್ರುವ ಶೆಟ್ಟಿ ಮತ್ತು ಶಿವಾನಿ ಅವರಿಗೆ ನೀಡಿ ಅವರ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.



























