ಬೆಂಗಳೂರು: ಬೈಕ್ ಪಾರ್ಕಿಂಗ್ ವಿಚಾರಕ್ಕೆ ಜನಾರ್ದನ ಭಟ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಬಳಿಕ ಯಲಹಂಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರಿಜ್ವಾನ್, ಸುಲೈಮಾನ್ ಬಂಧಿತ ಆರೋಪಿಗಳು.
ಮಾರ್ಚ್ 29ರಂದು ಯಲಹಂಕದಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಹೋದ್ಯೋಗಿಗಳಿಂದಲೇ ಜನಾರ್ದನ ಭಟ್ ಎಂಬಾತನ ಕೊಲೆ ಆಗಿತ್ತು. ಕೊಲೆ ಬಳಿಕ ಇಬ್ಬರು ಆರೋಪಿಗಳು ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿದ ಯಲಹಂಕ ಪೊಲೀಸರು ಕೋಲ್ಕತ್ತಾಗೆ ತೆರಳಿ ಇಬ್ಬರನ್ನು ಬಂಧಿಸಿದ್ದಾರೆ.
ಯೂನಾಫ್ ಡಿಜಿಟಲ್ ಸೆಲ್ಯೂಚನ್ ಎಂಬ ಟಿವಿ ರಿಪೇರಿ ಕಂಪನಿಯಲ್ಲಿ ಈ ಮೂವರು ಕೆಲಸಕ್ಕಿದ್ದರು. ಹೀಗಾಗಿ ಕಂಪನಿ ಮಾಲೀಕನೇ ಮೂವರಿಗೂ ಒಂದೇ ಮನೆ ಮಾಡಿ ಇರಿಸಿದ್ದರು. ಯಲಹಂಕದ ಶ್ರೀನಿವಾಸಪುರದ ಮನೆಯಲ್ಲಿ ಕಳೆದ ಆರು ತಿಂಗಳಿಂದ ಒಂದೇ ಮನೆಯಲ್ಲಿ ಮೂವರು ವಾಸವಿದ್ದರು.
ಒಟ್ಟಿಗೆ ವಾಸವಿದ್ದ ಜನಾರ್ಧನ್, ರಿಜ್ವಾನ್ ಹಾಗೂ ಸುಲೇಮಾನ್, ಆದರೆ ಇತ್ತೀಚಿಗೆ ಜನಾರ್ಧನ್ ಹಾಗೂ ಇಬ್ಬರ ನಡುವೆ ಮನಸ್ತಾಪ ಶುರುವಾಗಿದ್ದು, ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಮಾರ್ಚ್ 29ರಂದು ಕೆಲಸ ಮುಗಿಸಿ ಬೇಗ ರೂಂಗೆ ಬಂದಿದ್ದ ಜನಾರ್ಧನ್ ಭಟ್, ಒಳಗಡೆ ಬೈಕ್ ಪಾರ್ಕ್ ಮಾಡಿದ್ದ. ಬಳಿಕ ಬಂದ ಇಬ್ಬರು ತಮ್ಮ ಗಾಡಿ ಒಳಗೆ ಹಾಕಬೇಕಾಗಿತ್ತು ಎಂಬ ವಿಚಾರಕ್ಕೆ ರಿಜ್ವಾನ್ ಹಾಗೂ ಸುಲೇಮಾನ್ ಸೇರಿ ಜನಾರ್ಧನ್ ಜೊತೆ ಜಗಳ ಮಾಡಲು ಶುರುಮಾಡಿದ್ದಾರೆ. ಇದು ತಾರಕಕ್ಕೇರಿ ಹೊಡೆದಾಟ ಮಾಡಿಕೊಂಡಿದ್ದಾರೆ.
ಬಳಿಕ ಇತನಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ಇಬ್ಬರು, ಆತನ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಟೇಪ್ ಸುತ್ತಿದ್ದು, ಜನಾರ್ಧನ ಉಸಿರುಗಟ್ಟಿ ಸಾವನಪ್ಪಿದ್ದ. ಕೊನೆಗೆ ಆತ ಸಾವನ್ನಪ್ಪಿರುವುದು ತಿಳಿದು ಆರೋಪಿಗಳು ಬೆಂಗಳೂರು ಬಿಟ್ಟು ಪರಾರಿಯಾಗಿದ್ದರು. ಸತತ ಕಾರ್ಯಾಚರಣೆ ನಡೆಸಿದ ಯಲಹಂಕ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.




























