ಮಂಗಳೂರು: ಮತದಾರರ ಮೇಲೆ ‘ಮದ್ಯ’ದ ಆಮಿಷ ತಪ್ಪಿಸಲು ಅಬಕಾರಿ ಇಲಾಖೆ ಮದ್ಯದಂಗಡಿಗಳು ಮಾತ್ರವಲ್ಲದೆ ಮದ್ಯಪಾನಿಗಳ ಮೇಲೂ ಕಣ್ಣಿಟ್ಟಿದೆ.
ಮದ್ಯದಂಗಡಿಗಳು ಈ ಹಿಂದಿನ ವರ್ಷಗಳಲ್ಲಿ ಮತ್ತು ಚುನಾವಣೆಯ ಸಮಯದಲ್ಲಿ ಖರೀದಿಸಿರುವ ಮದ್ಯದ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸಿ ಒಂದು ವೇಳೆ ಚುನಾವಣ ಸಮಯದಲ್ಲಿ ಹೆಚ್ಚಿನ ಮದ್ಯ ಖರೀದಿಸಿರುವುದು ಕಂಡುಬಂದಲ್ಲಿ ಅಂತಹ ಮದ್ಯದಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಸಲಾಗುತ್ತಿದೆ.
ಚುನಾವಣ ಅಕ್ರಮಕ್ಕೆ ಖರೀದಿಸಿರುವುದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಯಾವುದೇ ವ್ಯಕ್ತಿ ನಿಯಮಾನುಸಾರ ಖರೀದಿಸಬಹುದಾದ ಪ್ರಮಾಣಕ್ಕಿಂತ ಹೆಚ್ಚು ಖರೀದಿಸಿದರೆ ಆತನ ಮೇಲೆಯೂ ನಿಗಾ ಇಡಲಾಗುತ್ತಿದೆ. ಮಾತ್ರವಲ್ಲದೆ ಕೆಲವು ಮದ್ಯದಂಗಡಿಗಳಲ್ಲಿ ರಾಜಕೀಯ ಪಕ್ಷದವರು ಟೋಕನ್ ಮೂಲಕ ಮದ್ಯ ನೀಡುವ ಬಗ್ಗೆಯೂ ಇಲಾಖೆಗೆ ಗುಮಾನಿ ಇದ್ದು ಇದರ ಪತ್ತೆಗಾಗಿ ಪ್ರತ್ಯೇಕ ವಿಚಕ್ಷಣ ದಳ ರಚಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಗೋವಾ ಮದ್ಯಕ್ಕೆ ಭಾರೀ ಬೇಡಿಕೆ..??
ಸಾಮಾನ್ಯ ದಿನಗಳಲ್ಲಿಯೂ ಕರಾವಳಿ ಭಾಗಕ್ಕೆ ಗೋವಾದಿಂದ ಭಾರೀ ಪ್ರಮಾಣದಲ್ಲಿ ಮದ್ಯ ಅಕ್ರಮ ಸಾಗಾಟ ನಡೆಯುತ್ತಿರುವುದು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದ್ದು ಇದೀಗ ಚುನಾವಣೆ ವೇಳೆ ಗೋವಾ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈಲು ಮತ್ತು ರಸ್ತೆ ಮಾರ್ಗದಲ್ಲಿ ವಿಶೇಷ ತಪಾಸಣಾ ದಳ ನಿಯೋಜಿಸಲಾಗಿದೆ. ಈಗಾಗಲೇ 195 ಲೀ. ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಬಿಲ್ ಇಟ್ಟುಕೊಳ್ಳುವುದು ಸುರಕ್ಷಿತ
ಅಬಕಾರಿ ನಿಯಮದ ಪ್ರಕಾರ ಓರ್ವ ವ್ಯಕ್ತಿ 2.03 ಲೀ. ಮದ್ಯವನ್ನು ಹೊಂದಿರಬಹುದು. ಆದರೆ ಅದಕ್ಕೆ ಬಿಲ್ ಅಗತ್ಯ. ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದ ಮದ್ಯವನ್ನು ಹೊಂದಿದ್ದರೆ ಬಿಲ್ ಕೇಳುವುದಿಲ್ಲ. ಹೆಚ್ಚಿನ ಪ್ರಮಾಣದ ಮದ್ಯ, ಗೋವಾ ಮದ್ಯ ಪತ್ತೆಯಾದರೆ ಬಿಲ್ ಬಗ್ಗೆ ವಿಚಾರಿಸಲಾಗುತ್ತದೆ. ಪರವಾನಿಗೆ ಹೊಂದದೆ ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದ ಮದ್ಯವನ್ನು ಸಾಗಿಸುವಂತಿಲ್ಲ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.
ಕಳ್ಳಭಟ್ಟಿ ಸಾರಾಯಿ ಮೇಲೂ ಕಣ್ಣು
ಕರಾವಳಿಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗೆ ಪ್ರಮಾಣ ಬಹುತೇಕ ಕಡಿಮೆಯಾಗಿದೆಯಾದರೂ ಕೆಲವೆಡೆ ಕಳ್ಳಭಟ್ಟಿ ತಯಾರಿಕೆ ನಡೆಯುತ್ತಿರುವ ಮಾಹಿತಿ ಅಬಕಾರಿ ಇಲಾಖೆಗೆ ಲಭ್ಯವಾಗಿದ್ದು ಈಗಾಗಲೇ ದಾಳಿ ನಡೆಸಿ 33 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ಹೋಮ್ ಡೆಲಿವರಿಯವರಿಗೆ ತಿಳಿವಳಿಕೆ
ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ಇತರ ವಸ್ತುಗಳ ಹೋಂ ಡೆಲಿವರಿಯವರ ಮೂಲಕ ಕಾನೂನು ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಹೋಂ ಡೆಲಿವರಿಯವರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಎಸ್‌ಪಿ ಡಾ. ವಿಕ್ರಮ್ ಅಮಟೆ ತಿಳಿಸಿದ್ದಾರೆ.


























