ಮಂಗಳೂರು: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಭಜರಂಗ್ ಬಲಿ ಕೀ ಜೈ’ ಎಂದು ಆರಂಭದಲ್ಲಿ ಹೇಳಿ ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಪ್ರತಿ ಚುನಾವಣಾ ಭಾಷಣದಲ್ಲಿ ಮೋದಿ ಆರಂಭದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿ ಭಾಷಣ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮೂಲ್ಕಿ ಪ್ರಚಾರ ಸಭೆಯಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳಿದ ಬಳಿಕ ತುಳುವಿನಲ್ಲಿ ಮಾತನ್ನು ಆರಂಭಿಸಿದರು. ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣ ಆರಂಭಿಸಿದರು.
ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ದಕ್ಷಿಣ ಕನ್ನಡ ಬಿಜೆಪಿ ಮುಂದಾಗಿತ್ತು. ಆದರೆ ನೆರೆದಿದ್ದ ಸಭಿಕರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಆರಂಭದಲ್ಲಿ ಪರುಶುರಾಮ ಕ್ಷೇತ್ರ, ಮೂಲ್ಕಿ ವೆಂಕಟರಮಣ ದೇವಸ್ಥಾನ, ನಾರಾಯಣ ಗುರು, ತೀರ್ಥಂಕರನ್ನು ಉಲ್ಲೇಖಿಸಿ ಭಾಷಣ ಮುಂದುವರಿಸಿದರು.
ಈ ಹಿಂದೆ ಮೋದಿ ಮಂಗಳೂರಿಗೆ ಬಂದಾಗಲೂ ಕನ್ನಡ ಭಾಷಾಂತರಕ್ಕೆ ಬಿಜೆಪಿ ಮುಂದಾಗಿತ್ತು. ಆ ಸಂದರ್ಭದಲ್ಲೂ ಅಲ್ಲಿ ನೆರೆದಿದ್ದ ಬಿಜೆಪಿ ಬೆಂಬಲಿಗರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದ್ದರು.
ಭಾಷಣದ ಕೊನೆಯಲ್ಲಿ ಎಲ್ಲರ ಜೊತೆ ಫ್ಲ್ಯಾಶ್ ಲೈಟ್ ಆನ್ ಮಾಡಲು ಹೇಳಿದ ಮೋದಿ ಪ್ರತಿ ಮನೆ ಮನೆಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಬೇಕು. ಈ ಮೂಲಕ ಮೋದಿಗೆ ಅಶೀರ್ವಾದ ಮಾಡಬೇಕೆಂದು ಎಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.
ಕೊನೆಗೂ ‘ಭಜರಂಗ್ ಬಲಿ ಕೀ ಜೈ’ ಘೋಷಣೆ ಬಳಿಕ ವಂದೇ ಮಾತರಂ ಘೋಷಣೆ ಕೂಗಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

























