ಪುತ್ತೂರು : ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮೇ.8 ರಂದು ಸಂಜೆ 3.30ಕ್ಕೆ ಬೊಳುವಾರಿನಿಂದ ದರ್ಬೆ ವರೆಗೆ ರೋಡ್ ಶೋ ನಡೆಯಲಿದ್ದು, ನಟಿ ರಮ್ಯಾ ಭಾಗವಹಿಸಲಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ರೀತಿಯ ರೋಡ್ ಶೋ ವಿಟ್ಲ ಹಾಗೂ ಉಪ್ಪಿನಂಗಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ “ನನ್ನ ಬೂತ್-ನಾನು ಅಭ್ಯರ್ಥಿ” ಎಂಬ ಶಿರೋನಾಮೆಯಡಿ ತಾಲೂಕಿನ 220 ಬೂತ್ ಗಳಲ್ಲಿ ಮತ ಪ್ರಚಾರ ಕಾರ್ಯಕ್ರಮ ಶನಿವಾರದಿಂದ ಹಮ್ಮಿಕೊಳ್ಳಲಾಗಿದೆ. ಸುಮಾರು 5 ಸಾವಿರ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.
ಈಗಾಗಲೇ ಬಿಡುಗಡೆ ಮಾಡಲಾದ ಪ್ರಣಾಳಿಕೆಯಂತೆ 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ.ಅಕ್ಕಿ, ಉಚಿತ ಬಸ್ ಪಾಸ್ ನೀಡಿಕೆ ಸಹಿತ ಪುತ್ತೂರಿನಲ್ಲಿ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಮುಂತಾದವುಗಳನ್ನೊಳಗೊಂಡು ಕಾಂಗ್ರೆಸ್ ಹಿಂದೆ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಮನೆ ಮನೆ ತಲುಪಿಸುವ ಕಾರ್ಯ ಮಾಡಲಾಗಿದೆ. ಈಗಾಗಲೇ ಒಲವು ಕಂಡಿದ್ದು, ಬಹುಮತದಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಕಟ್ಟಡಗಳಿದ್ದು, 240 ಹುದ್ದೆಗಳು ಖಾಲಿ ಇದೆ. ಇವುಗಳನ್ನು ತುಂಬುವುದರ ಜತೆಗೆ ಕೊಯಿಲದಲ್ಲಿ ಕೋಳಿ ಆಡು ಸಾಕಣೆಗೆ ಹೆಚ್ಚಿನ ಒತ್ತು ನೀಡಿ ಎನಿಮಲ್ ಹಬ್ ನ್ನಾಗಿ ಪರಿವರ್ತಿಸಲಾಗುವುದು ಎಂದರು.
ಉಳಿದಂತೆ ಡ್ರೈನೆಜ್ ವ್ಯವಸ್ಥೆ, ಕಟ್ ಕನ್ವರ್ಷನ್, ಸಿಂಗಲ್ ಲೇ ಓಟ್ ಅಪ್ರೂವಲ್ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದ ಅವರು, ತಾಲೂಕಿನಲ್ಲಿ ಈಗಾಗಲೇ 3800 94 ಸಿ. ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಬಾಕಿಯಿದ್ದು, ಈ ಕುರಿತು ಪ್ರತೀ ಗ್ರಾಮಗಳಲ್ಲಿ ಸಭೆ ನಡೆಸಿ ಹಕ್ಕುಪತ್ರವನ್ನು ಮನೆ ಮನೆ ತಲುಪಿಸುವ ಕಾರ್ಯವನ್ನು ನಾನು ಗೆದ್ದು ಬಂದಲ್ಲಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮಾನನಷ್ಟ ಮೊಕದ್ದಮೆ:
ಈಗಾಗಲೇ ನನ್ನ ಮೇಲೆ ಆರೋಪ ಹೊರಿಸಿರುವ ತಮ್ಮಣ್ಣ ಶೆಟ್ಟಿಯವರ ಮೇಲೆ ಕೇಸು ದಾಖಲಿಸಿದ್ದು, ಮೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ ಎಂದರು.
ಹೈಕಮಾಂಡ್ ಅಭಿಪ್ರಾಯದಂತೆ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಕುರಿತು ಸೇರಿಸಿದ್ದಾರೆ. ಈ ಕುರಿತು ನಮ್ಮ ವಿಚಾರವನ್ನು ಮುಂದಿನ ದಿನಗಳಲ್ಲಿ ತಿಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಕ್ತಾರ ಅಮಲ ರಾಮಚಂದ್ರ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಚುನಾವಣಾ ಏಜೆಂಟ್ ಭಾಸ್ಕರ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು.




























