ಪುತ್ತೂರು : ಆಸ್ತಿ, ಸಂಪತ್ತು ಮಾಡಿಕೊಡಲು ನನ್ನಲ್ಲಿ ಶಕ್ತಿ
ಇಲ್ಲ, ವಿದ್ಯೆ ಕೊಟ್ಟಿದ್ದೇನೆ. ಅದನ್ನು ಬಳಸಿಕೊಂಡು ಒಳ್ಳೆಯ
ಮಾರ್ಗದಲ್ಲಿ ಸಾಗಿ ಎಂದಿದ್ದ ತಂದೆಯ ನುಡಿಯಂತೆ ಮಗ ಬೆಳೆದ. ಇಂದಿನ ಆತನ ಸಾಧನೆ ಸಂತಸ ತಂದಿದೆ. ಇದು ಅಶೋಕ್ ಕುಮಾರ್ ರೈ ಅವರ ತಾಯಿ ಗಿರಿಜಾ ಎಸ್. ರೈ ಅವರ ಮನದ ಮಾತು.

ಕೋಡಿಂಬಾಡಿ ರೈ ಎಸ್ಟೇಟ್ನ ನಿವಾಸದಲ್ಲಿ ಪುತ್ರಿ ಜೊತೆ ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದ ಅವರು ಈ ಬಗ್ಗೆ ಮಾತನಾಡಿದರು.
ಅಶೋಕ್ ರೈ ಅವರ ತಂದೆ ಸಂಜೀವ ರೈ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಾಲ್ಯದಲ್ಲಿ ತೀರಾ ಬಡತನ ಇತ್ತು. ಹಂತ ಹಂತವಾಗಿ ಪರಿಶ್ರಮ ಪಟ್ಟು ಮೇಲೆ ಬಂದು ಮಗ ಈ ಸಾಧನೆ ಮಾಡಿದ್ದಾನೆ.
ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಡವರಿಗೆ ನೆರವಾಗುತ್ತಿದ್ದ. ರಾಜಕೀಯ ಕ್ಷೇತ್ರಕ್ಕೆ ಬಂದು ಮತ್ತಷ್ಟು
ಜನಸೇವೆ ಮಾಡಬೇಕು ಅನ್ನುವ ಆಶಯ ಹೊಂದಿ ಈ ಕ್ಷೇತ್ರಕ್ಕೆ ಬಂದಿದ್ದಾನೆ. ಜನರು ಆರ್ಶೀವಾದ ಮಾಡಿದ್ದಾರೆ. ನೂರಕ್ಕೆ ನೂರು ಆತ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾನೆ ಎಂದರು.























