ಪುತ್ತೂರು : ಬಸ್ ನಿಲ್ದಾಣದ ಬಳಿ ಜನಪ್ರತಿನಿಧಿಗಳ ಮಾನಹಾನಿ, ತೇಜೋವಧೆ ಮಾಡುವಂತ “ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಪ್ಲೆಕ್ಸ್ ಅಳವಡಿಕೆ ಬಗ್ಗೆ ಪುತ್ತೂರು ಬಿಜೆಪಿ ಮುಖಂಡರು ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು ತಾಲೂಕಿನ ನಗರ ವ್ಯಾಪ್ತಿಗೆ ಸೇರಿದ ಕೆ.ಎಸ್.ಆರ್.ಟಿ.ಸಿ ರ್ ನಿಲ್ದಾಣದ ಬಳಿಯಲ್ಲಿ ಮೇ.14 ರಂದು ರಾತ್ರಿ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿಗಳು,ಮಾಜಿ ಕೇಂದ್ರ ಸಚಿವರು ಮತ್ತು ಸಂಸದರಾದ ಡಿ.ವಿ ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರ ಭಾವಚಿತ್ರಗಳನ್ನು ಮಾನಹಾನಿ,ತೇಜೋವಧೆ ಮಾಡುವಂತ ಫ್ಲೆಕ್ಸ್ ಮೂಲಕ ಅಳವಡಿಸಿ ಸಾರ್ವಜನಿಕ ಸ್ಥಳದಲ್ಲಿ ಭಾವಚಿತ್ರಗಳಿಗೆ ಚಪ್ಪಲಿ ಹಾರವನ್ನು ಹಾಕಿ ಕೆಳಭಾಗದಲ್ಲಿ “ನೊಂದ ಹಿಂದೂ ಕಾರ್ಯಕರ್ತರು” ಎಂಬ ಪ್ಲೆಕ್ಸ್ ನ್ನು ಅಳವಡಿಸಲಾಗಿರುತ್ತದೆ. ಸದ್ರಿ ಕಿಡಿಗೇಡಿಗಳು ನಡೆಸಿದ ಕೃತ್ಯದಿಂದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ತೋರಿದ ಅಗೌರವದಿಂದ ನಮಗೆ ತೀವ್ರ ಅಘಾತವಾಗಿರುತ್ತದೆ ಮತ್ತು ತೀವ್ರ ನೋವುಂಟಾಗಿರುತ್ತದೆ.
ಈ ಕೃತ್ಯಗಳನ್ನು ಪುತ್ತೂರು ಭಾರತೀಯ ಜನತಾ ಪಾರ್ಟಿಯು ಖಂಡಿಸುತ್ತದೆ. ಈ ಕೃತ್ಯ ಎಸಗಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವೇಳೆ ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಪಿ.ಜಿ ಜಗನ್ನಿವಾಸ್ ರಾವ್, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ ಮತ್ತಿತರರು ಉಪಸ್ಥಿತರಿದ್ದರು..























