ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪದಡಿ ಬೆಳ್ತಂಗಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಗ್ರಾಮದ ರೆಂಕೆದಗುತ್ತು ಕೆಂಬರ್ಜೆಯ ಶೇಖರ ನಾಯ್ಕ ಎಂಬವರ ಪುತ್ರ ಯಶವಂತ ನಾಯ್ಕ(19) ರವರು ನೀಡಿದ ದೂರಿನಂತೆ ಉಮೇಶ್ ಕುಲಾಲ್, ರಂಜಿತ್ ಮತ್ತಿತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 504, 506, 323 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(S) ಎಸ್.ಸಿ/ಎಸ್.ಟಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಯಶವಂತ
ನಾಯ್ಕ ರವರು ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ವಾಟ್ಸಾಪ್
ಸ್ಟೇಟಸ್ ಹಾಕಿಕೊಂಡಿದ್ದರು. ಬಳಿಕ ಉಮೇಶ್ ಕುಲಾಲ್ ಎಂಬವರು ಮೇ.29 ರಂದು ಸಂಜೆ ಯಶವಂತ ನಾಯ್ಕ ರವರು ಕೆಲಸ ಮಾಡಿಕೊಂಡಿರುವ ಬೆಳ್ತಂಗಡಿಯ ಮೂರು ಮಾರ್ಗದ
ಬಳಿಯ ಅನುರಾಧ ಬಿಲ್ಡಿಂಗ್‌ನಲ್ಲಿರುವ ಫೋನು ಬಿ ಮೊಬೈಲ್ ಅಂಗಡಿಗೆ ಬಂದು ಯಶವಂತ ನಾಯ್ಕ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಂಗಿಯ ಕಾಲರ್ ಪಟ್ಟಿ ಹಿಡಿದು ಕೈಯಿಂದ ಎದೆಗೆ ಹಲ್ಲೆ ನಡೆಸಿದ್ದಾರೆ.
ಯಶವಂತ ನಾಯ್ಕ ರವರು ತಪ್ಪಿಸಿಕೊಂಡು ಅಂಗಡಿಯ
ಒಳಗೆ ಓಡಿ ಹೋಗಿ ತನ್ನ ಬೈಕಿನ ಕೀಯನ್ನು ತೆಗೆದುಕೊಂಡು ಬಂದು
ತನ್ನ ಬೈಕ್‌ನಲ್ಲಿ ಕುಳಿತುಕೊಂಡಿರುವಾಗ ಪರಿಚಯದ ರಂಜಿತ್ ಎಂಬವರು ಯಶವಂತ ನಾಯ್ಕ ರವರ ತಲೆಯಿಂದ ಹೆಲ್ಮಟ್ ಎಳೆದು ಜಾತಿ ನಿಂದನೆ ಮಾಡಿದ್ದಲ್ಲದೆ ಬೆದರಿಕೆ ಒಡ್ಡಿದ್ದಾರೆ. ಈ ಸಮಯದಲ್ಲಿ ಅವರೊಂದಿಗೆ ಕೃತ್ಯವೆಸಗಲು ಇತರರೂ ಸಮಾನ
ಉದ್ದೇಶದಿಂದ ಸೇರಿಕೊಂಡಿದ್ದರು. ಬಳಿಕ ಯಶವಂತ ನಾಯ್ಕ ರವರು ಬೆಳ್ತಂಗಡಿ ಸಂತೆಕಟ್ಟೆಗೆ ತನ್ನ ಬೈಕಿನಲ್ಲಿ ಹೋಗಿ ಪರಿಚಯದ
ಅಭಿಷೇಕ್ ರನ್ನು ಭೇಟಿಯಾಗಿ ನಡೆದ ಘಟನೆಯನ್ನು ತಿಳಿಸಿ
ಅವರೊಂದಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ..

























