ವಿಟ್ಲ : ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

ಎಲ್ಲಾ ಮಕ್ಕಳು ಬಹಳ ಸಂಭ್ರಮದಿಂದ, ಲವಲವಿಕೆಯಿಂದ ಶಾಲೆಗೆ ಹಾಜರಾದರು.
ಶಾಲಾ ಪ್ರವೇಶ ದ್ವಾರಕ್ಕೆ ತಳಿರು ತೋರಣ ಹಾಗೂ ಬಲೂನುಗಳಿಂದ ಆಕರ್ಷಣೀಯವಾಗಿ ಸಿಂಗರಿಸಿದ್ದು, ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಚಪ್ಪಾಳೆಯ ಸುರಿಮಳೆಯೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಶಾಲಾ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ಎಲ್ ಎನ್ ಕೂಡೂರು ರವರು ನೆರವೇರಿಸಿದರು. ಹಾಗೂ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾಲೆಯಲ್ಲಿ ಅನುಭವಿ ಶಿಕ್ಷಕರ ತಂಡವು ಕಾರ್ಯನಿರ್ವಹಿಸುತ್ತಿದ್ದು ಮಕ್ಕಳು ಇಲ್ಲಿ ಸುಲಭವಾಗಿ ಜ್ಞಾನಾರ್ಜನೆಯಲ್ಲಿ ತೊಡಗಬಹುದು ಹಾಗೂ ವಿದ್ಯಾರ್ಥಿಗಳಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸುವಂತೆ ತಿಳಿಸಿ ಧೈರ್ಯ ತುಂಬಿದರು.

ಇದು ಶಾಲಾ ಪ್ರಾರಂಭೋತ್ಸವಕ್ಕೆ ಹೊಸ ಮೆರುಗನು ನೀಡಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೋಹನ ಎ, ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿಯಾದ ರಾಧಾಕೃಷ್ಣ ಎ, ಶಾಲೆಯ ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ, ಶಿಕ್ಷಕರು, ಶಿಕ್ಷಕೇತರವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿಯಾದ ಶೀಲಾ ಕೆ ನೆರವೇರಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಿಹಿ ಹಂಚಲಾಯಿತು.


























