ವಿಟ್ಲ : ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವರ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ದರ್ಗಾದ ಬಳಿ ನಡೆದಿದೆ.
ಬಂಟ್ವಾಳ ತಾಲೂಕು ಮಣಿನಾಲ್ಕೂರು ಅಜಿಲಮೊಗೇರು ನಿವಾಸಿ ಮಹಮ್ಮದ್ ಸರ್ವನ್ (27) ಹಲ್ಲೆಗೊಳಗಾದವರು.
ಸರ್ವನ್ ನೀಡಿದ ದೂರಿನ ಮೇರೆಗೆ ಜಸೀಲ್, ಇಸುಬು, ಜಿಯಾದ್, ಉಸ್ಮಾನ್, ಶರೀಫ್ ಹಾಗೂ ಇತರ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ವನ್ ಹೋಗುತ್ತಿದ್ದ ಕಾರನ್ನು ಆಪಾದಿತ ಜಸೀಲ್ ತನ್ನ ಮೋಟಾರ್ ಸೈಕಲ್ ನಲ್ಲಿ ರಾಂಗ್ ಸೈಡ್ ಬಂದು ಅಡ್ಡಗಟ್ಟಿ ಹಳೆ ವೈಷಮ್ಯದ ಹಿನ್ನೆಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹೊಡೆದಿದ್ದು, ನಂತರ ಇದೆ ವಿಚಾರವಾಗಿ ಜೂ.2 ರಂದು ಸಂಜೆ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ದರ್ಗಾದ ಬಳಿ ಸರ್ವನ್ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಂಬಳಬೆಟ್ಟು ಉರಿಮಜಲು ನಿವಾಸಿಗಳಾದ ಜಸೀಲ್, ಇಸುಬು, ಜಿಯಾದ್, ಉಸ್ಮಾನ್, ಶರೀಫ್, ಹಾಗೂ ಇತರೆ ಮೂರು ಜನರು ಹಲ್ಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಸರ್ವನ್ ರನ್ನು ಕಾರಿನಿಂದ ಕೆಳಗೆ ಎಳೆದು ಕೈಯಿಂದ ಮುಖಕ್ಕೆ, ಬೆನ್ನಿಗೆ ,ಹೊಟ್ಟೆಗೆ ಕೈಯಿಂದ ಹೊಡೆದು ಕಾಲುಗಳಿಂದ ತುಳಿದಿದ್ದು, ಈ ವೇಳೆ ಸರ್ವನ್ ಜೊತೆ ಕೆಲಸ ಮಾಡುತ್ತಿದ್ದ ಫಾರೂಕ್ ಹಲ್ಲೆ ಮಾಡುವುದನ್ನು ತಡೆಯಲು ಬಂದಾಗ ಜಸೀಲ್ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಫಾರೂಕ್ ನ ತಲೆಗೆ, ಬೆನ್ನಿಗೆ ಹೊಡೆದಿದ್ದು ಇಸುಬು ,ಜಿಯಾದ್, ಉಸ್ಮಾನ್, ಶರೀಪ್ ಹಾಗೂ ಇತರೆ ಮೂರು ಜನರು ಕೈಯಿಂದ ಫಾರೂಕ್ ನ ಮುಖಕ್ಕೆ,ಹೊಟ್ಟೆಗೆ ಹೊಡೆದು ಕಾಲುಗಳಿಂದ ತುಳಿದಿದ್ದು, ಈ ವೇಳೆ ಅಲ್ಲಿ ಸೇರಿದವರು ಹಲ್ಲೆ ಮಾಡುವುದನ್ನು ತಡೆಯಲು ಬಂದಾಗ ಆಪಾದಿತರು ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಬಳಸಿದ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ ಹೊರಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 341,143,147,323,324,504,506 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ.

























