ಪುತ್ತೂರು : ನಗರಕ್ಕೆ ಸಂರ್ಪಕವಾಗಿರುವ ಎಪಿಎಂಸಿ ರಸ್ತೆಯಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಏನೋ ಆಗಿದೆ. ಆದರೆ ಚತುಷ್ಪಥ ರಸ್ತೆಯಲ್ಲಿ ದ್ವಿಪಥ ಮಾತ್ರ ಪೂರ್ಣಗೊಂಡಿದ್ದು, ಇನ್ನೊಂದು ಭಾಗ ಪೂರ್ಣಗೊಳ್ಳದೆ ಇಲ್ಲಿನ ಅಪಾಯಕಾರಿ ತಿರುವುಗಳು ಅಪಘಾತಕ್ಕೆ ಕಾರಣವಾಗುತ್ತಿದೆ. ರೈಲ್ವೇ ಅಂಡರ್ ಪಾಸ್ ಬಳಿ ಇರುವ ಖಾಸಗಿ ಜಮೀನನ್ನು ರೈಲ್ವೇ ಇಲಾಖೆ ಒತ್ತುವರಿ ಮಾಡದೆ ಚತುಷ್ಪಥ ರಸ್ತೆ ಸಾಧ್ಯವಿಲ್ಲವಾದ್ದರಿಂದ ದ್ವಿಪಥದಲ್ಲಿ ಹೋಗುವ ವಾಹನಗಳಿಗೆ ಅಪಘಾತ ಭಯವಿದೆ.

ಎಪಿಎಂಸಿ ರಸ್ತೆಯ ಸಾಲ್ಮರದಲ್ಲಿರುವ ರೈಲ್ವೆ ಗೇಟ್ ಸಮಸ್ಯೆ ನಿವಾರಣೆಗೆ ಪಕ್ಕದಲ್ಲಿ 100 ಮೀಟರ್ ಅಂತರದಲ್ಲಿ ಸೂತ್ರಬೆಟ್ಟು ರಸ್ತೆಯಾಗಿ 13.82 ಕೋಟಿಯ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯಿತು.
ರೈಲ್ವೇ ಅಂಡರ್ ಪಾಸ್ ಯೋಜನೆಗೆ ರಚಿಸಿದ್ದ ನಕ್ಷೆಯಲ್ಲಿ ಮುಂದಿನ ಅಭಿವೃದ್ಧಿಯ ಚಿಂತನೆಯೊಂದಿಗೆ ಚತುಷ್ಪಥಕ್ಕೂ ಅಂಡರ್ ಪಾಸ್ ನಲ್ಲಿ ಹೆಚ್ಚುವರಿ ಸೌಲಭ್ಯ ನೀಡಲಾಗಿತ್ತು. ದ್ವಿಪಥವಾಗಿ ನಿರ್ಮಾಣಗೊಂಡ ಅಂಡರ್ ಪಾಸ್ ಯೋಜನೆ ಮುಂದಿನ ದಿನ ರಸ್ತೆ ಅಗಲೀಕರಣ ಸಂದರ್ಭ ಚತುಷ್ಪಥ ರಸ್ತೆಗೂ ಅವಕಾಶ ನೀಡಲಾಯಿತು.
ಈ ನಿಟ್ಟಿನಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭ ರೈಲ್ವೇ ಸ್ಥಳವಲ್ಲದೆ ಸ್ಥಳೀಯ ಖಾಸಗಿ ಒಡೆತನದ ಸ್ಥಳವನ್ನೂ ಬಳಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಯಿತು. ಆದರೇ ಖಾಸಗಿ ಒಡೆತನದಿಂದ ರೈಲ್ವೇ ಇಲಾಖೆ ಕಾನೂನು ಬದ್ಧವಾಗಿ ಪರಿಹಾರೋಪಾಯ ನೀಡಿ ಜಮೀನು ಪಡೆಯಬೇಕಾಗಿದೆ. ಈ ಪ್ರಕ್ರಿಯೆಗೆ ಮುಂದಾಗದ ಕಾರಣ ಸದ್ಯ ದ್ವಿಪಥ ರಸ್ತೆಯನ್ನೇ ವಾಹನ ಸವಾರರು ಬಳಸಬೇಕಾಗಿದೆ. ಆದರೆ ಈ ರಸ್ತೆಯಲ್ಲಿರುವ ಅಪಾಯಕಾರಿ ತಿರುವು ವಾಹನ ಸವಾರರಿಗೆ ಅಪಘಾತದ ಕರೆಗಂಟೆಯಾಗಿದೆ.
ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಶಾಲಾ ಬಸ್ ಗಳು, ಆಟೋರಿಕ್ಷಾಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ವಾಹನದಲ್ಲಿ ಸಂಚರಿಸುತ್ತಿರುವವರು ಹಾಗೂ ನಡೆದುಕೊಂಡು ಹೋಗುತ್ತಿರುವ ಸಾರ್ವಜನಿಕರು, ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಿಸಿದ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಮುತುವರ್ಜಿ ವಹಿಸಿ ಅತಿ ಶೀಘ್ರದಲ್ಲಿ ಚತುಷ್ಪಥ ರಸ್ತೆಯನ್ನಾಗಿಸೇಕೆಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.
ಕಾಮಗಾರಿ ಪೂರ್ತಿಯಾಗದೆ,ತರಾತುರಿಯಲ್ಲಿ ಉದ್ಘಾಟನೆ- ನೂರುದ್ದೀನ್ ಸಾಲ್ಮರ
ಸಾಲ್ಮರ ರೈಲ್ವೆ ಕ್ರಾಸ್ ಬಳಿ ಚುನಾವಣಾ ಪೂರ್ವದಲ್ಲಿ ತರಾತುರಿಯಲ್ಲಿ ಉದ್ಘಾಟನೆಗೊಂಡ ಎಪಿಎಂಸಿ ಅಂಡರ್ ಪಾಸ್ ರಸ್ತೆಯು ಅಪಾಯಕ್ಕೆ ಕೊರಳೊಡುತ್ತಿದೆ. ಈ ಅಂಡರ್ ಪಾಸ್ ರಸ್ತೆಗಾಗಿ ಸಿದ್ಧಪಡಿಸಿದ ನೀಲಿ ನಕಾಶೆಯಂತೆ ಚತುಷ್ಪಥ ರಸ್ತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು, ಕಾಮಗಾರಿ ಪೂರ್ಣಗೊಳ್ಳದ ಕಾರಣ ದ್ವಿಮುಖ ರಸ್ತೆಯಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರೈಲ್ವೆ ಹಳಿಯ ಕೆಳಭಾಗದಲ್ಲಿ ಸುಮಾರು 600 ಮೀಟರ್ ನಷ್ಟು ನಿರ್ಮಿಸಿದ ಈ ರಸ್ತೆಯಲ್ಲಿ, ಸುಮಾರು 300 ಮೀಟರ್ ನಷ್ಟು ಅಪಾಯಕಾರಿ ತಿರುವನ್ನು ಹೊಂದಿರುತ್ತದೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ಶಾಲಾ ಬಸ್ಸುಗಳು, ಆಟೋರಿಕ್ಷಾಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ವಾಹನದಲ್ಲಿ ಸಂಚರಿಸುತ್ತಿರುವವರು ಹಾಗೂ ನಡೆದುಕೊಂಡು ಹೋಗುತ್ತಿರುವ ಸಾರ್ವಜನಿಕರು, ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣವೇನೆಂದರೆ, ಈ ರಸ್ತೆಯು ನೀಲಿ ನಕಾಶೆಯಂತೆ ಚತುಷ್ಪಥ ರಸ್ತೆಯಾಗಿ ತಯಾರಾಗಿದ್ದರೆ ಈ ತಿರುಗುಗಳಲ್ಲಿರುವ ಅಪಾಯವನ್ನು ತಪ್ಪಿಸಬಹುದಾಗಿತ್ತು.., ಆದರೆ ಈ ಚತುಷ್ಪಥ ರಸ್ತೆಯ ಕಾಮಗಾರಿ ಕೆಲವು ಕಾರಣಗಳಿಂದ ಅರ್ಧಕ್ಕೆ ನಿಂತಿದೆ ಈ ಕಾರಣವನ್ನು ಸರಿಪಡಿಸಬೇಕಾದವರು ಅಂದು ಮುತುವರ್ಜಿ ವಹಿಸದ ಕಾರಣದಿಂದಾಗಿ ಈ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿದೆ.
ಸಮರ್ಪಕವಾಗಿ ನೀರನ್ನು ಹರಿಸುವ ಚರಂಡಿ ಸರಿಯಾಗಿ ನಿರ್ಮಾಣವಾಗದೆ ಇರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಇನ್ನು ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಳವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಎಚ್ಚರಗೊಂಡು ಅಪೂರ್ಣಕೊಂಡ ಎಪಿಎಂಸಿ ರಸ್ತೆಯ ಕಾಮಗಾರಿಯನ್ನು ಕೂಡಲೇ ಪೂರ್ತಿಗೊಳಿಸಿ ಚತುಷ್ಪಥ ರಸ್ತೆಯನ್ನಾಗಿ ಮಾಡದಿದ್ದಲ್ಲಿ ಈ ರಸ್ತೆಯಲ್ಲಿ ಅಪಘಾತದ ಸರಮಾಲೆ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನೂತನವಾಗಿ ಚುನಾಯಿಸಲ್ಪಟ್ಟ ಪುತ್ತೂರು ಶಾಸಕರು, ಪುತ್ತೂರಿನ ಅಭಿವೃದ್ಧಿ ಕಾರ್ಯದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದು, ಈ ಬಗ್ಗೆಯೂ ಶೀಘ್ರ ಪರಿಹಾರ ಕಂಡುಕೊಂಡು ಸಾರ್ವಜನಿಕರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಕೆಪಿಸಿಸಿ ಸಂಯೋಜಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.