ವಿಟ್ಲ : ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಹೊಸತಾಗಿ ದಾಖಲಾದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸುವ ‘ಫ್ರೆಶರ್ಸ್ ಡೇ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅವರು ಶಾಲೆಗೆ ಹೊಸತಾಗಿ ದಾಖಲಾಗಿರುವ ವಿದ್ಯಾರ್ಥಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರು, ಕೋಶಾಧಿಕಾರಿಗಳಾದ ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಶಾಲೆಯ ಪ್ರಾಂಶುಪಾಲರಾದ ಜಯರಾಮ ರೈ ಹಾಗೂ ಉಪಪ್ರಾಂಶುಪಾಲೆಯಾದ ಜ್ಯೋತಿ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೊಸ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಸ್ವಾಗತಿಸಲಾಯಿತು ಮತ್ತು ಅವರ ಹವ್ಯಾಸಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಶಾಲಾ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ನೂತನ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಶಾಲಾ ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ, ನಿರೂಪಣೆಗೈದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯರಾದ ಗೀತಾ ಹಾಗೂ ನಯನಾಕ್ಷಿ ಸಂಯೋಜಿಸಿದ್ದರು. ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಕಾರ್ಯಕ್ರಮಕ್ಕೆ ಸಹಕರಿಸಿದರು.



























