ಪುತ್ತೂರು : ಮಹಿಳೆಯೋರ್ವರು ಪುಟ್ಟ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪುತ್ತೂರಿನಲ್ಲಿರುವ ಪ್ರಿಯಕರನನ್ನು ಸೇರಿಕೊಂಡಿದ್ದು, ಮಹಿಳೆಯ ಮನೆಯವರು ಪುತ್ತೂರಿನ ಕೋಡಿಂಬಾಡಿಯಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಮಹಿಳೆ ಮತ್ತು ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಹುಬ್ಬಳ್ಳಿಯ ಮಹಿಳೆಯೋರ್ವರು ತವರು ಮನೆಯಲ್ಲಿ ತನ್ನ ಮಗುವನ್ನು ತೊರೆದು, ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು. ಆಕೆ ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು, ಆತ ಕೋಡಿಂಬಾಡಿ ಭಾಗದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮಹಿಳೆಯ ಮನೆಯವರಿಗೆ ಮೊದಲೇ ತಿಳಿದಿತ್ತು.
ಆಕೆ ನೇರವಾಗಿ ತನ್ನ ಪ್ರಿಯಕರನ ಬಳಿಗೆ ಬಂದಿರಬಹುದು ಎಂಬ ಶಂಕೆಯಿಂದ ಆಕೆಯ ಮನೆಯವರು ರಾತ್ರಿ ವೇಳೆ ಪುತ್ತೂರಿನ ಕೋಡಿಂಬಾಡಿಗೆ ಬಂದಿಳಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಅವರಿಂದ ಮಾಹಿತಿ ಪಡೆದು ಈ ಬಗ್ಗೆ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲಿಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾತ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ಮುಂದುವರೆಸಿದ ಪೊಲೀಸರು ಟವರ್ ಲೊಕೇಶನ್ ಮೂಲಕ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆನ್ನಲಾಗಿದೆ. ಈ ಕುರಿತು ಸಿದ್ದಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ತಕ್ಷಣಕ್ಕೆ ನೆರವಿಗೆ ಬಂದಿದ್ದು ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು, ತಡರಾತ್ರಿ ಯಾರೂ ಇಲ್ಲದ ವೇಳೆ ಆ ಕುಟುಂಬಕ್ಕೆ ಬದಿನಾರು ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ್ದಲ್ಲದೆ ಪೊಲೀಸರನ್ನು ಕರೆಸಿ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದ್ದು ಹುಬ್ಬಳ್ಳಿಯಿಂದ ಬಂದ ಕುಟುಂಬ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೈಯಲ್ಲಿ ಹಣ ಇಲ್ಲದಿದ್ದರೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಾಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆಂದು ತಿಳಿದಿರಲಿಲ್ಲ ಎಂದು ಮಹಿಳೆಯ ತಾಯಿ ದುಃಖಿತರಾಗಿದ್ದಾರೆ..