ಕಡಬ:ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿರುವ ಖಾಸಗಿ ಮೊಬೈಲ್ ಟವರ್‌ನ ನಿರ್ವಹಣೆಗೆ ಬಂದಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಅಘಾತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಮೇ.2ರಂದು ರಾತ್ರಿ ನಡೆದಿದೆ.ಉಪ್ಪಿನಂಗಡಿ ಗ್ರಾಮದ ನಟ್ಟಿಬೈಲು ದಿವಂಗತ ವಾಸುದೇವ ನಾಯಕ್‌ರವರ ಪುತ್ರ ರಾಧೇಶ್ಯಾಮ್ ನಾಯಕ್(40ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಉಪ್ಪಿನಂಗಡಿಯಿಂದ ಆಲಂಕಾರು ವ್ಯಾಪ್ತಿಯಲ್ಲಿ ಬರುವ ಏರ್‌ಟೆಲ್ ಟವರ್‌ಗಳ ನಿರ್ವಹಣೆಯನ್ನು ಮಾಡುತ್ತಿದ್ದ ಅವರು ಮೇ.2ರಂದು ರಾತ್ರಿ ನೆಕ್ಕರೆ ಟವರ್‌ನ ಪರಿಶೀಲನೆಗೆ ಬಂದಿದ್ದರು.ಈ ವೇಳೆ ಟವರ್‌ಗೆ ವಿದ್ಯುತ್ ಸರಬರಾಜಾಗುತ್ತಿದ್ದ ವಿದ್ಯುತ್ ಪರಿವರ್ತಕದ ಕಂಬದ ಬಳಿ ಯಾವುದೋ ಕೆಲಸ ನಿರ್ವಹಿಸುವ ವೇಳೆ ವಿದ್ಯುತ್ ಆಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆಲಂಕಾರು ಭಾಗದಲ್ಲಿ ಮೇ 2ರಂದು ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ಇದರಿಂದಾಗಿ ಮೊಬೈಲ್ ಟವರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಸಾಧ್ಯತೆ ಇದ್ದು ಇದರ ದುರಸ್ತಿ ಮಾಡುವ ವೇಳೆ ವಿದ್ಯುತ್ ಅಘಾತವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಮಗಳೂ ಜೊತೆಗಿದ್ದರು:ಆಲಂಕಾರು ನೆಕ್ಕರೆ ಟವರ್‌ನ ಪರಿಶೀಲನೆಗೆ ಬಂದ ವೇಳೆ ಹಿರಿಯ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಮಗಳನ್ನು ಕಾರಿನಲ್ಲಿಯೇ ಕುಳ್ಳಿರಿಸಿ ಟವರ್‌ನ ಪರಿಶೀಲನೆಗೆ ಹೋಗಿದ್ದರು.ಸುಮಾರು ಹೊತ್ತಾದರು ಕಾರು ರಸ್ತೆಯಲ್ಲೇ ಬಾಕಿಯಾಗಿತ್ತು.ಇದೇ ವೇಳೆ ಟವರ್‌ಗೆ ವಿದ್ಯುತ್ ಸಂಪರ್ಕವಾಗಿದ್ದ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಟವರ್ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.ಘಟನೆ ಸಂದರ್ಭ ಮೃತರ ಮಗಳು ಕಾರಲ್ಲಿಯೇ ಇದ್ದುದರಿಂದ ಆಕೆಯ ಜೀವ ಉಳಿಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಘಟನಾ ಸ್ಥಳಕ್ಕೆ ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.