ಪುತ್ತೂರು : ದೇವಸ್ಥಾನದ ಒಳಗೆ ಅನ್ಯಮತೀಯರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರದ ನಗರಾಧ್ಯಕ್ಷರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರಿಗೆ ಪುತ್ತಿಲ ಪರಿವಾರದ ಪದಾಧಿಕಾರಿಗಳು ಮನವಿ ಪತ್ರ ನೀಡಿದರು.

ಜೂ.25 ರಂದು ದೇವಸ್ಥಾನದ ಒಳಗೆ ಅನ್ಯಮತೀಯರು ಪ್ರವೇಶಿಸಿದ್ದು, ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ಕಾನೂನು ವಿರೋಧವಾಗಿದ್ದರೂ ಭಾವಚಿತ್ರವನ್ನು ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿರುತ್ತದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಾವಚಿತ್ರದ ಜೊತೆಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಷಯ ನಿಜವೇ ಆದಲ್ಲಿ ಪುತ್ತಿಲ ಪರಿವಾರ ಇದನ್ನು ತೀವ್ರವಾಗಿ ಖಂಡಿಸುತ್ತದೆ.
ಮುಂದಿನ ದಿನಗಳಲ್ಲಿ ಈ ರೀತಿಯಾದಲ್ಲಿ ಇದಕ್ಕೆ ದೇವಳದ ಆಡಳಿತ ಮಂಡಳಿಯೇ ನೇರ ಹೊಣೆಯಾಗಿರುತ್ತದೆ. ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಪುತ್ತಿಲ ಪರಿವಾರದ ನಗರಾಧ್ಯಕ್ಷರಾದ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಪುತ್ತೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲು, ಪುತ್ತಿಲ ಪರಿವಾರದ ಪ್ರಮುಖರಾದ ಪ್ರವೀಣ್ ತಿಂಗಳಾಡಿ, ಪ್ರವೀಣ್ ಶೆಟ್ಟಿ, ರೂಪೇಶ್ ನಾಯ್ಕ್, ಮನೀಶ್, ಕೆ.ಪಿ. ಶೆಟ್ಟಿ ಉಪಸ್ಥಿತರಿದ್ದರು.
ಪುತ್ತೂರು ಶಾಸಕರಾದ ಅಶೋಕ್ ರೈ ರವರು ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರ ಜೊತೆ ಅನ್ಯಕೋಮಿನ ವ್ಯಕ್ತಿ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
























