ಪುತ್ತೂರು : ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308 ಎಬಿರನ್ವಯ ದಿನಾಂಕ ನಿಗದಿಗೊಳಿಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ತಾಲೂಕಿನ ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾ.ಪಂಗಳಲ್ಲಿ ತೆರವಾದ ತಲಾ ಒಂದೊಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 2 (ಹಿಂದುಳಿದ ವರ್ಗ ಎ ಮೀಸಲು) ಕ್ಷೇತ್ರದಿಂದ ಚುನಾಯಿತರಾಗಿದ್ದ ನಿವೃತ್ತ ಎಸ್.ಐ ರುಕ್ಮಯ್ಯ, ಮೂಲ್ಯ ಹಾಗೂ ನಿಡ್ಪಳ್ಳಿ ಗ್ರಾ.ಪಂನ ನಿಡ್ಪಳ್ಳಿ ವಾರ್ಡ್ 2ನಲ್ಲಿ (ಸಾಮಾನ್ಯ ಮೀಸಲಾತಿ ) ಚುನಾಯಿತರಾಗಿದ್ದ ಮುರಳಿ ಭಟ್ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ಸಂಬಂಧಿಸಿದಂತೆ ಜು.6 ರಂದು ಅಧಿಸೂಚನೆ ಪ್ರಕಟಣೆಗೊಳ್ಳಲಿದ್ದು, ಅಂದೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.
ಜು.12 ರಂದು ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಜು.13 ರಂದು ನಾಮಪತ್ರ ಪರಿಶೀಲನೆ, ಜು.15 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ. ಜು.23 ರಂದು ಮತದಾನ ನಡೆಯಲಿದೆ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಅವಶ್ಯವಿದ್ದರೆ ಜು.25 ರಂದು ಮರುಮತದಾನ, ಜು.26ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ನಡೆಯಲಿರುವ ಪಂಚಾಯತ್ ವ್ಯಾಪ್ತಿಯಲ್ಲಿ ಜು.6 ರಿಂದ 2 ತನಕ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋ ಚಿತ್ರೀಕರಣ ಮಾಡುವುದು. ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲು ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.

























