ಪುತ್ತೂರು : ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಬಿಲ್ಲವ ವಿದ್ಯಾರ್ಥಿ ಸಂಘ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಸರಕಾರಿ ಬಸ್ ಗಳನ್ನೇ ಅವಲಂಬಿಸಿ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಸರಕಾರಿ ಬಸ್ ನಲ್ಲಿ ಅನಿವಾರ್ಯತೆ ತುಂಬಾ ಹೆಚ್ಚಾಗಿದೆ. ಆದುದರಿಂದ ಇರುವಂತಹ ಸುಬ್ರಹ್ಮಣ್ಯ-ಕಾಣಿಯೂರು, ಮಾಡಾವು-ಬೆಳ್ಳಾರೆ ಹಾಗೂ ವಿಟ್ಲ-ಅನಂತಾಡಿ ಕಡೆಯಿಂದ ಬರುವಂತಹ ವಿದ್ಯಾರ್ಥಿಗಳಿಗೆ ಬಸ್ಸಿನ ತೊಂದರೆ ತುಂಬಾ ಇರುತ್ತದೆ ಮತ್ತು ಇರುವ ಕೆಲವೇ ಬಸ್ ಗಳಲ್ಲಿ ಸ್ಥಳವಕಾಶ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಬರಲು ಅನಾನುಕೂಲವಾಗಿರುತ್ತದೆ. ಇದಕ್ಕಾಗಿ ಬೆಳಗಿನ ಶಾಲಾ ಅವಧಿ ಮತ್ತು ಸಾಯಂಕಾಲದ ಶಾಲಾ ಅವಧಿಗೆ ನಗರ-ಪುತ್ತೂರು-ದರ್ಬೆ ಮಾರ್ಗದಲ್ಲಿ ಸರಕಾರಿ ಸಿಟಿ ಬಸ್ಸಗಳನ್ನು ಆಯೋಜಿಸಬೇಕು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಎಲ್ಲಾ ಶಾಲಾ-ಕಾಲೇಜುಗಳಿಗೆ ಬರುವಂತಹ ವಿದ್ಯಾರ್ಥಿಗಳು ಯಾವ ಮಾರ್ಗದಲ್ಲಿ ಇದ್ದರೂ ಅವರಿಗೆ ಬಸ್ಸು ನಿಲುಗಡೆ ಮಾಡುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಬೇಕು ಹಾಗೂ ಬಸ್ಸಿನ ಕೊರತೆ ಇರುವಲ್ಲಿ ಹೆಚ್ಚುವರಿ ಬಸ್ಸುಗಳನ್ನು ಶಾಲಾ- ಕಾಲೇಜಿನ ಸಮಯದಲ್ಲಿ ಓಡಿಸಬೇಕೆಂದು, ಈ ಎಲ್ಲಾ ವಿಷಯಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸಲ್ಲಿಕೆ ವೇಳೆ ಬಿಲ್ಲವ ವಿದ್ಯಾರ್ಥಿ ಸಂಘ ಪುತ್ತೂರು ಘಟಕದ ಅಧ್ಯಕ್ಷ ಭವಿಷ್ ಎಸ್. ಸುವರ್ಣ, ಖಜಾಂಚಿ ದ್ಯುತಿ, ಸಾಂಸ್ಕೃತಿಕ ನಿರ್ದೇಶಕ ಗ್ರೀಷ್ಮ ಎನ್., ಯಶ್ ವಂತ್ ಅಂಚನ್ ಕೆ.ಎನ್., ಹೇಮಂತ್ ಎನ್.ಎಂ., ಧನುಷ್ ಉಪಸ್ಥಿತರಿದ್ದರು.
























