ಒಂಟಿತನ ಕಾಡಿದರೆ ಏನು ಮಾಡುತ್ತೀರಾ ಹೇಳಿ..!?? ವಯಸ್ಸಾದ ಕೆಲವರು ಸರಿಯಾದ ಸಂಗಾತಿಯ ಹುಡುಕಿ ಮದುವೆಯಾಗುವ ಮೂಲಕ ಒಂಟಿತನಕ್ಕೆ ಫುಲ್ ಸ್ಟಾಪ್ ಇಟ್ಟರೆ, ವಯಸ್ಸಿಗೆ ಬಾರದವರು ಸ್ನೇಹಿತರಿಗೆ ಕರೆ ಮಾಡುವ ಮೂಲಕ ಅಥವಾ ಪಾರ್ಕ್, ಸಿನಿಮಾ ಹೀಗೆ ಸುತ್ತಾಡುತ್ತಾ ಒಂಟಿತನ ನಿವಾರಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಏನು ಮಾಡಿದ್ದಾಳೆ ಗೊತ್ತಾ? ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆದರೆ ಇಷ್ಟಕ್ಕೆ ಈಕೆ ಸುದ್ದಿಯಾಗಿದ್ದರೆ ಅಚ್ಚರಿಯಾಗುತ್ತಿರಲಿಲ್ಲ, ಕಾರಣ ಬರೋಬ್ಬರಿ 2,761 ಬಾರಿ ಕರೆ ಮಾಡಿದ್ದಾಳೆ.
ಹೌದು. ಜಪಾನಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪ್ರಿಫೆಕ್ಟರ್ನಲ್ಲಿರುವ ಮಾಟ್ಸುಡೋದ ನಿವಾಸಿ 51 ವರ್ಷದ ಹಿರೋಕೊ ಹಟಗಾಮಿ ಎಂಬ ಮಹಿಳೆ ಒಂಟಿತನ ನಿವಾರಣೆಗೆ ಅಗ್ನಿ ಶಾಮಕ ದಳದ ತುರ್ತು ನಂಬರ್ಗೆ ಕರೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆಕೆಯನ್ನು ಬಂಧನ ಮಾಡಲಾಗಿದೆ.
ಹಿರೋಕೊ ಹಟಗಾಮಿ ಏಕಾಂಗಿತನವನ್ನು ಅನುಭವಿಸುತ್ತಿದ್ದಳು. ಆಕೆಗೆ ತಾನು ಮಾತನಾಡಬೇಕು, ನಾನು ಮಾತನಾಡಿದ್ದನ್ನು ಯಾರಾದರು ಕೇಳಬೇಕು ಎಂಬ ಹಂಬಲವಿತ್ತು. ಆದರೆ ಆ ಹಂಬಲವನ್ನು ನಿವಾರಿಸಲು ಯಾರು ಇರಲಿಲ್ಲ. ಈ ಕಾರಣಕ್ಕೆ ಎರಡು ಮುಕ್ಕಾಲು ವರ್ಷದಲ್ಲಿ ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದ್ದಾಳೆ.
ಹಿರೋಕೊ ಹಟಗಾಮಿ 2020ರ ಆಗಸ್ಟ್ 15ರಿಂದ ಪ್ರಾರಂಭಿಸಿ 2023ರ ಮೇ ವರೆಗೆ ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಕೊನೆಗೆ ಸಿಕ್ಕಿಬಿದ್ದಿದ್ದಾಳೆ. ಹಾಗಾಗಿ ಆಕೆಯನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ.
ಪ್ರಾರಂಭದಲ್ಲಿ ಹಿರೋಕೊ ಹಟಗಾಮಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಬಳಿಕ ಪೊಲೀಸರು ತಮಗಾಗುವ ಶಿಕ್ಷೆಯ ಬಗ್ಗೆ ವಿವರಿಸಿದ ಬಳಿಕ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಬಂಧನದ ಬಳಿಕ ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಿದ್ದಾಳೆ.

























