ಮಂಗಳೂರು : ಮಳೆಗಾಲದಲ್ಲಿ ಮುಗುಡು ಮೀನು ಹಿಡಿಯಲು ಹಾಗೂ ಈಜಾಡಲು ಹೋಗಿದ್ದ ಮಂಗಳೂರು ನಗರದ ಬಜಾಲ್ ಅಳಪೆಯ ವೀಕ್ಷಿತ್ ಮತ್ತು ವರುಣ್ ಎಂಬ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ.

ಕಂಕನಾಡಿ ನಗರ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಮೃತದೇಹಗಳನ್ನು ಮೇಲಕ್ಕೆ ತೆಗೆದಿದ್ದಾರೆ.

ರವಿವಾರ ರಜಾ ದಿನದ ಹಿನ್ನೆಲೆಯಲ್ಲಿ ಒಟ್ಟು ಆರು ಮಂದಿ ಸ್ನೇಹಿತರು ಜೊತೆಯಾಗಿ ಅಳಪೆ ಪಡ್ಪು ಬಳಿ ಇರುವ ಕೆರೆ ಬಳಿ ಮುಗುಡು ಮೀನು ಹಿಡಿಯಲು ಹೋಗಿದ್ದಾರೆ.

ಅಷ್ಟರಲ್ಲಿ ವೀಕ್ಷಿತ್ ನೀರಿನಲ್ಲಿ ಮುಳುಗಿದ್ದು ಇದನ್ನು ಕಂಡ ವರುಣ್ ಆತನನ್ನು ರಕ್ಷಿಸಲು ತಾನೂ ಇಳಿದು ನೀರುಪಾಲಾಗಿದ್ದಾನೆ. ಕೂಡಲೇ ಇತರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಂಕನಾಡಿ ನಗರ ಠಾಣಾ ಪೊಲೀಸರು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಹುಡುಕುವ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯರ ಸಹಕಾರದೊಂದಿಗೆ ತುಂಬಾ ಹೊತ್ತು ಹುಡುಕಾಡಿ ಕೊನೆಗೂ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ.
ವೀಕ್ಷಿತ್ನ ತಂದೆ ಆಟೋರಿಕ್ಷಾ ಡ್ರೈವರ್ ಆಗಿದ್ದು, ವರುಣ್ ಅವರು ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























