ಬೆಂಗಳೂರು : ಕಂಬಳ ಎಂದಾಕ್ಷಣ ನೆನಪಿಗೆ ಬರುವುದು ಕರಾವಳಿ. ಅದರಲ್ಲೂ ‘ಕಾಂತಾರ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕಂಬಳ ಮತ್ತೊಮ್ಮೆ ಜನಜನಿತವಾಯಿತು.
ಕರಾವಳಿಯಲ್ಲಷ್ಟೇ ನಡೆಯುವ, ನಡೆಸಬಹುದಾದ ಅಂಥದ್ದೊಂದು ಕಂಬಳ ರಾಜಧಾನಿ ಬೆಂಗಳೂರಿನಲ್ಲೇ ನಡೆದರೆ ಹೇಗೆ..!?? ಎಂಬ ಯೋಚನೆ ಕಳೆದ ಕೆಲವು ವರ್ಷದಿಂದ ಕರಾವಳಿಗರನೇಕರ ಮನಸ್ಸಲ್ಲಿದೆ. ಇದೀಗ ಅದಕ್ಕೂ ಕಾಲ ಕೂಡಿ ಬಂದಿದೆ.
ಹೌದು.. ಬೆಂಗಳೂರಿನಲ್ಲೇ ಕಂಬಳ ನಡೆಯಲಿದೆ. ಅದಕ್ಕಾಗಿ ಸ್ಥಳ ಪರಿಶೀಲನೆ ಕೂಡ ನಡೆದಿದೆ. ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮಾಚರಣೆ ಸಲುವಾಗಿ ಬೆಂಗಳೂರಿನಲ್ಲೇ ಕಂಬಳ ನಡೆಸಲು ನಿರ್ಧರಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ.
ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆದಿದೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನ ನಿಗದಿಯಾಗಿಲ್ಲ. ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ.
ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.